ಕೊನೆಗೂ ಕೈಗೂಡಿತು ಗಜ ಪ್ರಸವ

ಮಾನ್ಯರೆ,
ಅಲ್ಪಸಂಖ್ಯಾತರು, ದಲಿತರಾದಿಯಾಗಿ ದೇಶದ ಅಸಂಖ್ಯ ದೇಶಭಕ್ತರಿಗೆ, ನಿರಂತರ ಗೋವಿನ ವಿಚಾರವಾಗಿ ನೆಮ್ಮದಿ ಕೆಡಿಸಿದ, ಸ್ವಯಂ ದೇಶಭಕ್ತರೆಂದು ಎಣಿಸಿಕೊಂಡ ಗೋರಕ್ಷರಿಂದ ಗರ್ಭಧರಿಸಿದ ‘ಗಜ’ ಕೊನೆಗೆ ಪ್ರಸವ ಆಗಿ, ದೇಶಕ್ಕೆ ನೆಮ್ಮದಿಯ ಉಸಿರು ಬಿಡುವಂತಾಯಿತು.
ಪದೇ ಪದೇ ಗೋ ಮಾಂಸದ ವಿಷಯವನ್ನೆತ್ತಿ, ದೇಶವಾಳುವ ಪಕ್ಷದ ಸಂಸದರಿಂದಲೂ, ನಾಯಕರಿಂದಲೂ, ಕಾವಿಧಾರಿಗಳಿಂದಲೂ ಗೂಂಡಾಗಿರಿ, ಹಲ್ಲೆ, ಪ್ರಕ್ಷುಬ್ಧತೆ, ಕೊಲೆ, ಕೊಲೆಯತ್ನ, ದರೋಡೆಗಳಿಗೆ, ಶಸ್ತ್ರಾಸ್ತ್ರಗಳಿಂದ ಹಿಂಸಾತ್ಮಕ ಕೃತ್ಯಗಳಿಗೆ ಸಮಾಜ ಕಂಟಕರಿಗೆ ಸಹಕಾರ ದೊರೆಯುತ್ತಿದ್ದರೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವುದನ್ನು ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ ವರ್ತಿಸುತ್ತಾ ಅಂತಾರಾಷ್ಟ್ರೀಯವಾಗಿ ಭಾರತವನ್ನು ನಗೆಪಾಟಲಿಗೆ ಗುರಿಯಾಗಿಸಿದ ಕೇಂದ್ರಾಡಳಿತದ ಪರಿಸ್ಥಿತಿ ‘ಗಜ’ ಗರ್ಭಿಣಿಯಂತಾಗಿತ್ತು!
ಭಾರತದ ಬುದ್ಧಿಜೀವಿಗಳಿಂದಲೂ, ವಿಪಕ್ಷಗಳಿಂದಲೂ ನೋವುಂಡ ದಲಿತ ಸಮುದಾಯದಿಂದಲೂ ‘ಗಜಪ್ರಸವ’ಕ್ಕಾಗಿ ಇಲ್ಲದ ಪ್ರಯತ್ನ ಮಾಡಿದರೂ, ಪ್ರಸವ ವಿಫಲವಾಗಿತ್ತು!. ಕೊನೆಗೆ ವಿಶ್ವಸಂಸ್ಥೆಯವರು ಮತ್ತು ಅಮೆರಿಕದವರು ಸ್ವಯಂ ಪ್ರೇರಿತರಾಗಿ ತೀಕ್ಷ್ಣವಾದ ‘ಪ್ರಯತ್ನ’ ಮಾಡಿದಾಗ ‘‘ಹಗಲಲ್ಲಿ ಗೋರಕ್ಷಣೆ ಮಾಡುವವರು, ರಾತ್ರಿಯಲ್ಲಿ ದರೋಡೆಕೋರರಾಗಿದ್ದಾರೆ’’ ಎಂದುಕೊಳ್ಳುತ್ತಾ, ‘‘ಗೋ ವಿಚಾರದಲ್ಲಿ ಕೊಲ್ಲುವುದಿದ್ದರೆ, ನನ್ನನ್ನೇ ಕೊಲ್ಲಿರಿ’’ ಎಂಬಂತೆ ಪ್ರಸವವಾಯಿತು.
ಈ ಪ್ರಸವದ ‘ಫಲ’ ಬೆಳೆಯುವ ಲಕ್ಷಣ ಕಾಣುವುದಿಲ್ಲ! ಪ್ರಾರಂಭದಲ್ಲೇ, ಪ್ರಸವಕ್ಕೆ ತಿರುಗೇಟು ‘ಗಜ’ ಪೋಷಿತರಿಂದ ಮೊಳಗತೊಡಗಿದ್ದು, ‘ಗಜ’ ರಕ್ಷಕರ ಹಿಂದಿರುವ ಕಾಣದ ಕೈಗಳು ಗೊಚರಿಸ ತೊಡಗಿದೆ. ‘‘ನಾ ಹೊಡೆದಂತೆ ಮಾಡಿದಾಗ., ನೀ ಅತ್ತಂತೆ ಮಾಡು’’ ಎಂಬಂತೆ ಪರಿಸ್ಥಿತಿ ಕಂಡು ಬರುತ್ತಿದೆ.
ಏನಿದ್ದರೂ ಶೋಷಣೆಗಳಿಗೆ ಬಾಯಿ ಮಾತಿನಲ್ಲಾದರೂ ದೇಶದ ಪ್ರಧಾನಿಯವರಿಂದ ತಡವಾದರೂ, ಅರಾಜಕತೆಗೆ ತಕ್ಕ ಪ್ರತಿಕ್ರಿಯೆ ಬಂದದ್ದು ದೇಶಪ್ರೇಮಿಗಳಿಗೆ ನೆಮ್ಮದಿಯಾಯಿತು. ಇನ್ನು ಹದ್ದುಬಸ್ತಿಗೆ ತರುವುದು ಕಾನೂನು ಪಾಲಕರ ಜವಾಬ್ದಾರಿ.





