ಹಜ್, ಉಮ್ರಾ ಯಾತ್ರಿಕರಿಗೆ ಶುಭ ಸುದ್ದಿ
ಸೌದಿ ವೀಸಾ ಶುಲ್ಕ ಪರಿಷ್ಕರಣೆ
ಜಿದ್ದಾ, ಆ. 9: ಸೌದಿ ಅರೇಬಿಯದಲ್ಲಿ ವೀಸಾ ಶುಲ್ಕವನ್ನು ಪರಿಷ್ಕರಿಸಲಾಗಿದೆಯೆಂದು ಅಲ್ಲಿನ ಸಚಿವ ಸಂಪುಟ ಘೋಷಿಸಿದೆ. ಹಜ್ ಅಥವಾ ಉಮ್ರಾ ಯಾತ್ರೆಗೆ ಪ್ರಥಮ ಬಾರಿ ಆಗಮಿಸುವ ಎಲ್ಲಾ ಯಾತ್ರಾರ್ಥಿಗಳ ವೀಸಾ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಆ ಶುಲ್ಕವನ್ನು ಸೌದಿ ಸರಕಾರವೇ ಭರಿಸುವುದು.
ಪರಿಷ್ಕೃತ ಶುಲ್ಕದಂತೆ ಪ್ರತಿಯೊಂದು ಸಿಂಗಲ್ ಎಂಟ್ರಿ ವೀಸಾಗೆ 2000 ಸೌದಿ ರಿಯಾಲ್ (ಸುಮಾರು 35,600 ರೂಪಾಯಿ) ಪಾವತಿಸಬೇಕಿದ್ದು, ಇದು ಪ್ರಥಮ ಬಾರಿಯ ಯಾತ್ರಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ಯಾತ್ರಾರ್ಥಿಗಳಿಗೂ ಅನ್ವಯಿ ಸುತ್ತದೆ.
ಆರು ತಿಂಗಳು, ಒಂದು ವರ್ಷ ಹಾಗೂ ಎರಡು ವರ್ಷ ಅವಧಿಯ ಮಲ್ಟಿಪಲ್ ಎಂಟ್ರಿ ವೀಸಾಗೆ ಯಾತ್ರಾರ್ಥಿಗಳು ಕ್ರಮವಾಗಿ 3000 (53,400 ರೂಪಾಯಿ), 5000 (89,000 ರೂಪಾಯಿ) ಹಾಗೂ 8000 (1,42,400 ರೂಪಾಯಿ) ಸೌದಿ ರಿಯಾಲ್ ಪಾವತಿಸಬೇಕಿದೆ. ಆದರೆ ಸೌದಿ ಅರೇಬಿಯ ಕೆಲವೊಂದು ದೇಶಗಳೊಂದಿಗೆ ಸಹಿ ಹಾಕಿರುವ ದ್ವಿಪಕ್ಷೀಯ ಒಪ್ಪಂದಗಳಿಗೆ ಈ ಪರಿಷ್ಕರಣೆ ಅನ್ವಯಿಸುವುದಿಲ್ಲ.
ಪರಿಷ್ಕೃತ ಟ್ರಾನ್ಸಿಟ್ ವೀಸಾ ಶುಲ್ಕ 300 ಸೌದಿ ರಿಯಾಲ್ (5,340 ರೂಪಾಯಿ)ಗಳಾಗಿದ್ದು ಸಮುದ್ರದ ಮೂಲಕ ದೇಶದಿಂದ ತೆರಳುವವರು 50 ಸೌದಿ ರಿಯಾಲ್ (890 ರೂಪಾಯಿ) ಎಕ್ಸಿಟ್ ವೀಸಾ ಶುಲ್ಕ ಪಾವತಿಸಬೇಕಾಗಿದೆ. ಈ ಪರಿಷ್ಕೃತ ಶುಲ್ಕ ಅಕ್ಟೋಬರ್ 2, 2016 ರಿಂದ ಜಾರಿಗೆ ಬರಲಿದೆ.
ರೆಸಿಡೆನ್ಸ್ ಪರ್ಮಿಟ್ (ಇಖಾಮ)ಗಾಗಿ ಎಕ್ಸಿಟ್ ಹಾಗೂ ರಿ-ಎಂಟ್ರಿ ವೀಸಾ ಶುಲ್ಕ ಎರಡು ತಿಂಗಳ ಅವಧಿಗೆ (ಸಿಂಗಲ್ ಟ್ರಿಪ್) 300 ಸೌದಿ ರಿಯಾಲ್ ಆಗಿದ್ದು, ರೆಸಿಡೆನ್ಸ್ ಪರ್ಮಿಟ್ ಊರ್ಜಿತದಲ್ಲಿರುವ ತನಕ ಪ್ರತಿ ಹೆಚ್ಚುವರಿ ತಿಂಗಳ ವಾಸಕ್ಕೆ 100 ಸೌದಿ ರಿಯಾಲ್ ಶುಲ್ಕ ವಿಧಿಸಲಾಗುವುದು. ಇದೇ ವಿಭಾಗದ ಮಲ್ಟಿಪಲ್ ಟ್ರಿಪ್‌ಗಳಿಗೆ ಮೂರು ತಿಂಗಳ ಅವಧಿಗೆ 500 ಸೌದಿ ರಿಯಾಲ್ ಶುಲ್ಕ ವಿಧಿಸಲಾಗುವುದಾದರೆ, ರೆಸಿಡೆನ್ಸ್ ಪರ್ಮಿಟ್ ಊರ್ಜಿತದಲ್ಲಿರುವ ತನಕ ಪ್ರತಿ ಹೆಚ್ಚುವರಿ ತಿಂಗಳ ವಾಸಕ್ಕೆ 200 ಸೌದಿ ರಿಯಾಲ್ ಶುಲ್ಕ ಪಾವತಿ ಮಾಡಬೇಕಾಗಿದೆ.
ರಾಜಕುಮಾರ ಮುಹಮ್ಮದ್ ಬಿನ್ ನಯೇಫ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸೌದಿ ಸಚಿವ ಸಂಪುಟದ ಸಭೆಯಲ್ಲಿ ಮೇಲಿನ ಮಾಹಿತಿಯನ್ನು ನೀಡಲಾಗಿದೆ.







