ರೋವಿಂಗ್: ಪದಕದ ಸ್ಪರ್ಧೆಯಿಂದ ಹೊರ ನಡೆದ ದತ್ತು ಭೋಕನಲ್

ರಿಯೋ ಡಿ ಜನೈರೊ, ಆ. 9: ಭಾರತ ರೋವರ್ ದತ್ತು ಬಬನ್ ಭೋಕನಲ್ ಪುರುಷರ ಸಿಂಗಲ್ಸ್ ಸ್ಕಲ್‌ನ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ನಾಲ್ಕನೆ ಸ್ಥಾನ ಪಡೆಯುವುದರೊಂದಿಗೆ ಸೆಮಿಫೈನಲ್‌ಗೆ ತಲುಪುವುದರಿಂದ ವಂಚಿತರಾಗಿದ್ದಾರೆ. ಪದಕ ಗೆಲ್ಲುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.
ಮಂಗಳವಾರ ನಡೆದ ರಿಯೋ ಗೇಮ್ಸ್‌ನಲ್ಲಿ ದತ್ತು 2000 ಮೀ. ದೂರವನ್ನು 6:59.89 ನಿಮಿಷದಲ್ಲಿ ತಲುಪಿದರು. ಮೂರನೆ ಹಾಗೂ ಕೊನೆಯ ಕ್ವಾಲಿಫೈಯರ್ ಪೊಲೆಂಡ್‌ನ ನತನ್ ವೆಗರ್‌ಝಿಕಿ ಅವರಿಗಿಂತ ಕೇವಲ 6 ಸೆಕೆಂಡ್‌ನಿಂದ ಹಿಂದುಳಿದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಕ್ರೊಯೇಷಿಯದ ಡಮಿರ್ ಮಾರ್ಟಿನ್ 6:44.44 ನಿಮಿಷದಲ್ಲಿ ಗುರಿ ತಲುಪಿ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದರು. ಅಲೆನ್ ಕ್ಯಾಂಪ್‌ಬೆಲ್(6:49.41) ಎರಡನೆ ಸ್ಥಾನ ಪಡೆದರು.
ಹೀಟ್ಸ್‌ನಲ್ಲಿ 7:21.67 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಸೈನಿಕ ದತ್ತು ಬಬನ್ ಉತ್ತಮ ಆರಂಭ ಪಡೆದಿದ್ದರು. 500 ಮೀ. ದೂರದ ತನಕ ಎರಡನೆ ಸ್ಥಾನದಲ್ಲಿದ್ದರು. ಆದರೆ, ನಿಧಾನವಾಗಿ ಅವರ ವೇಗ ಕಡಿಮೆಯಾದ ಕಾರಣ ಮುಂದಿನ ಸುತ್ತಿಗೇರಲು ವಿಫಲರಾದರು.
ಹೀನಾ ಸಿಧುಗೆ 15ನೆ ಸ್ಥಾನ:
ಒಲಿಂಪಿಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ಮಂಗಳವಾರ ನಡೆದ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಶೂಟರ್ ಹೀನಾ ಸಿಧು ಪ್ರೆಸಿಶನ್ ಸುತ್ತಿನ ಅಂತ್ಯದಲ್ಲಿ 286 ಅಂಕ ಗಳಿಸಿದ್ದಾರೆ. ಸ್ಪರ್ಧೆಯಲ್ಲಿದ್ದ 20 ಶೂಟರ್‌ಗಳ ಪೈಕಿ 15ನೆ ಸ್ಥಾನ ಪಡೆದಿದ್ದಾರೆ.
ಸಿಧು ರವಿವಾರ ನಡೆದ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು.







