ನಾಗಸಾಕಿ ಪರಮಾಣು ದಾಳಿಗೆ 71 ವರ್ಷ
ಇಲ್ಲಿಗೆ ಭೇಟಿ ನೀಡುವಂತೆ ವಿಶ್ವ ನಾಯಕರಿಗೆ ಮೇಯರ್ ಕರೆ
ಟೋಕಿಯೊ, ಆ. 9: ಜಪಾನ್ ನಗರ ನಾಗಸಾಕಿ ಮೇಲೆ ಅಮೆರಿಕ ನಡೆಸಿದ ವಿನಾಶಕಾರಿ ಅಣು ಬಾಂಬ್ ದಾಳಿಗೆ ಮಂಗಳವಾರ 71 ವರ್ಷಗಳು ತುಂಬಿದವು.
ಅಂದು ಬಾಂಬ್ ಸ್ಫೋಟಗೊಂಡ ಸಮಯ ಬೆಳಗ್ಗಿನ 11:02ಕ್ಕೆ ಸರಿಯಾಗಿ ಗಂಟೆ ಮೊಳಗಿತು. ಆಗ ಬದುಕುಳಿದ ವೃದ್ಧರು ಮತ್ತು ಸಂತ್ರಸ್ತರ ಸಂಬಂಧಿಕರು ಸೇರಿದಂತೆ ಸಾವಿರಾರು ಮಂದಿ ಒಂದು ನಿಮಿಷದ ವೌನ ಆಚರಿಸಿದರು.
ಸ್ಫೋಟದಲ್ಲಿ ತಕ್ಷಣಕ್ಕೆ 74,000 ಮಂದಿ ಸಾವನ್ನಪ್ಪಿದ್ದರು. ನಂತರದ ತಿಂಗಳುಗಳು ಮತ್ತು ವರ್ಷಗಳಲ್ಲಿ ವಿಕಿರಣ ಕಾಯಿಲೆಯಿಂದಾಗಿ ಇನ್ನೂ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಹಿರೋಶಿಮದ ಮೇಲೆ ನಡೆದ ಪ್ರಥಮ ಅಣು ಬಾಂಬ್ ದಾಳಿಯ ಮೂರು ದಿನಗಳ ಬಳಿಕ ನಾಗಸಾಕಿಯ ಮೇಲೆ ಬಾಂಬ್ ಹಾಕಲಾಗಿತ್ತು.
ಹಿರೋಶಿಮ ಬಾಂಬ್ ದಾಳಿಯಲ್ಲಿ ಒಟ್ಟಾರೆ 1.4 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಾಗಸಾಕಿ ಮೇಯರ್ ಟೊಮಿಹಿಸ ಟವೆ, ಹಿರೋಶಿಮಕ್ಕೆ ಮೇ ತಿಂಗಳಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಭೇಟಿಯನ್ನು ಶ್ಲಾಘಿಸಿದರು. ಹಾಲಿ ಅಮೆರಿಕದ ಅಧ್ಯಕ್ಷರೊಬ್ಬರು ಅಲ್ಲಿಗೆ ನೀಡಿದ ಮೊದಲ ಭೇಟಿ ಅದಾಗಿತ್ತು.
‘‘ವಾಸ್ತವಾಂಶಗಳನ್ನು ತಿಳಿದುಕೊಳ್ಳುವುದು ಪರಮಾಣು ಅಸ್ತ್ರ ಮುಕ್ತ ಭವಿಷ್ಯವೊಂದನ್ನು ರೂಪಿಸುವ ನಿಟ್ಟಿನಲ್ಲಿ ಆರಂಭಿಕ ಹಂತವಾಗಬಹುದು’’ ಎಂದು ಟವೆ ಹೇಳಿದರು. ತನ್ನ ನಗರಕ್ಕೆ ಭೇಟಿ ನೀಡುವಂತೆ ಅವರು ವಿಶ್ವ ನಾಯಕರನ್ನು ಆಮಂತ್ರಿಸಿದರು.







