ಭಾರತ ಸೆಲ್ಫಿ ತೆಗೆಯಲು ಒಲಿಂಪಿಕ್ಸ್‌ಗೆ ತೆರಳಿದೆ: ಶೋಭಾ ಡೇ ವ್ಯಂಗ್ಯ

ಹೊಸದಿಲ್ಲಿ, ಆ.9: ಭಾರತೀಯ ಅಥ್ಲೀಟ್‌ಗಳು ಬ್ರೆಝಿಲ್‌ನಲ್ಲಿ ನಡೆಯುತ್ತಿರುವ ರಿಯೋ ಒಲಿಂಪಿಕ್ಸ್‌ಗೆ ಪದಕ ಗೆಲ್ಲುವ ಬದಲು ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ ಎಂದು ಲೇಖಕಿ ಶೋಭಾ ಡೇ ವ್ಯಂಗ್ಯವಾಡಿದ್ದಾರೆ. ಅವರ ಈ ವ್ಯಂಗ್ಯಕ್ಕೆ ಸ್ಟಾರ್ ಶೂಟರ್ ಅಭಿನವ್ ಬಿಂದ್ರಾ ಸಹಿತ ಹಲವು ಪ್ರಮುಖ ಕ್ರೀಡಾಪಟುಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗಳು ಆರಂಭವಾಗಿ ಮೂರು ದಿನಗಳು ಕಳೆದಿದ್ದರೂ ಭಾರತಿಯ ಅಥ್ಲೀಟ್‌ಗಳು ಪದಕ ಗೆಲ್ಲಲು ಅಸಮರ್ಥರಾಗಿದ್ದಾರೆ. ಶೂಟಿಂಗ್‌ನಲ್ಲಿ 10 ಮೀ. ಏರ್‌ರೈಫಲ್ ಸ್ಪರ್ಧೆಯಲ್ಲಿ ಸೋಮವಾರ ರಾತ್ರಿ ಫೈನಲ್‌ಗೆ ತಲುಪಿದ್ದ ಹಿರಿಯ ಶೂಟರ್ ಅಭಿನವ್ ಬಿಂದ್ರಾ 4ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಭಾರತೀಯ ಅಥ್ಲೀಟ್‌ಗಳ ರಿಯೋ ಗೇಮ್ಸ್‌ನ ಪ್ರದರ್ಶನವನ್ನು ಟ್ವಿಟರ್‌ನಲ್ಲಿ ಟೀಕಿಸಿರುವ ಶೋಭಾ, ನಮ್ಮ ಅಥ್ಲೀಟ್‌ಗಳು ಪದಕ ಗೆಲ್ಲುವ ಬದಲಿಗೆ ಸೆಲ್ಫಿ ತೆಗೆದುಕೊಳ್ಳಲು ರಿಯೋಗೆ ತೆರಳಿದ್ದಾರೆ ಎಂದು ಹೇಳಿದ್ದಾರೆ.
‘‘ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡದ ಗುರಿ: ರಿಯೋ ಜಾವೊ, ಸೆಲ್ಫಿ ಲೊ, ಖಾಲಿ ಹಾಥ್ ಮೇ ವಾಪಸ್ ಆವೋ (ರಿಯೋಗೆ ಹೋಗು, ಸೆಲ್ಫಿ ತೆಗಿ, ಖಾಲಿ ಕೈಯ್ಯಲ್ಲಿ ವಾಪಾಸಾಗು)ಎಂಬಂತಾಗಿದೆ. ಇಲ್ಲಿ ಹಣ ಹಾಗೂ ಅವಕಾಶ ಪೋಲಾಗಿದೆ’’ ಎಂದು ಶೋಭಾ ಕಳೆದ ರಾತ್ರಿ ಟ್ವೀಟ್ ಮಾಡಿದ್ದರು.
ಶೋಭಾ ಅವರ ಟ್ವೀಟ್‌ಗೆ ಅಗ್ರ ಅಥ್ಲೀಟ್‌ಗಳು ಖಾರವಾಗಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶೋಭಾ ಅವರ ಅಭಿಪ್ರಾಯ ತಪ್ಪು. ಇಡೀ ವಿಶ್ವದ ಮುಂದೆ ಅತ್ಯುತ್ತಮ ಪ್ರದರ್ಶನ ನೀಡಲು ಯತ್ನಿಸಿರುವ ಭಾರತೀಯರ ಬಗ್ಗೆ ಅವರು ಹೆವ್ಮೆು ಪಡಬೇಕಾಗಿತ್ತು ಎಂದು ಬಿಂದ್ರಾ ಪ್ರತಿಕ್ರಿಯಿಸಿದ್ದಾರೆ.
ನಿಮ್ಮಂತಹ ವ್ಯಕ್ತಿಗಳ ನಿಲುವು ಬದಲಾದರೆ, ಪರಿಸ್ಥಿತಿಯೂ ಬದಲಾಗಬಹುದು. ಹೆಮ್ಮೆಯ ಭಾರತೀಯ...ಹೆಮ್ಮೆಯ ಕ್ರೀಡಾಪಟು... ಎಂದು ಭಾರತದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕಿಡಿಕಾರಿದ್ದಾರೆ.







