ಕೋವಿಯ ನೆರಳಲ್ಲಿ ಸ್ವಾತಂತ್ರ್ಯದ ಸವಿ

ಗಾಂಧೀಜಿಯ ಪ್ರಬಲ ಅಸ್ತ್ರವಾಗಿದ್ದ ಉಪವಾಸ ಸತ್ಯಾಗ್ರಹಕ್ಕೆ ಸ್ವಾತಂತ್ರೋತ್ತರದಲ್ಲಿ ಘನತೆಯನ್ನು ತಂದು ಕೊಟ್ಟದ್ದು ಬಹುಶಃ ಇರೋಮ್ ಶರ್ಮಿಳಾ ಅವರೇ ಇರಬೇಕು. ಸುಮಾರು 16 ವರ್ಷಗಳ ಕಾಲ ಬರೇ ನಳಿಕೆಯ ಮೂಲಕ ದ್ರವಾಹಾರದ ಜೊತೆಗೆ ಅವರು ಮಣಿಪುರದ ಜನರ ಪರವಾಗಿ ಪ್ರತಿಭಟನೆ ನಡೆಸಿದರು. ಇಡೀ ಮಣಿಪುರ ರಾಜ್ಯವೇ ಮೂಗಿಗೆ ಕೊಳವೆ ಸಿಕ್ಕಿಸಿಕೊಂಡು ಆಸ್ಪತ್ರೆಯಲ್ಲಿ ಮಲಗಿದೆಯೇನೋ ಎಂಬ ರೂಪಕವನ್ನು ಅವರು ಭಾರತ ಸರಕಾರಕ್ಕೆ ಮಾತ್ರವಲ್ಲ ವಿಶ್ವಕ್ಕೇ ನೀಡಿದರು. ಯಾವುದೇ ಉಗ್ರವಾದಿ ಸಂಘಟನೆಗಳು ನಡೆಸಿದ ಹಿಂಸಾಪ್ರತಿಭಟನೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಇರೋಮ್ ಶರ್ಮಿಳಾ ಅವರ ಪ್ರತಿಭಟನೆ ಮಣಿಪುರದ ಜನರ ನೋವು, ದುಮ್ಮಾನಗಳನ್ನು ವಿಶ್ವಕ್ಕೆ ತಲುಪಿಸಿತು. ಸೇನೆ ತನ್ನ ವಿಶೇಷಾಧಿಕಾರದ ಮೂಲಕ ಮಣಿಪುರವೂ ಸೇರಿದಂತೆ ಈಶಾನ್ಯ ಭಾರತದಲ್ಲಿ ನಡೆಸುತ್ತಿರುವ ಜನವಿರೋಧಿ ಕೃತ್ಯಗಳನ್ನು ಈ ಮೂಲಕ ಇರೋಮ್ ಹೊರ ಜಗತ್ತಿಗೆ ತಲುಪಿಸಿದರು. ಈ ಒಂಟಿ ಹೆಣ್ಣು ಆಸ್ಪತ್ರೆಯಲ್ಲಿ ಮಲಗಿದ್ದರೂ ಸದಾ ಸರಕಾರಗಳಿಗೆ ಮುಜುಗರವನ್ನು ಸೃಷ್ಟಿಸುತ್ತಲೇ ಇದ್ದರು. ಮಾಧ್ಯಮಗಳಲ್ಲಿ ಈಕೆಯ ಫೋಟೊ ಪ್ರಕಟವಾದಾಕ್ಷಣ ನಮಗೆ ಆಫ್‌ಸ್ಪಾ ಕಾಯ್ದೆಯ ಕ್ರೌರ್ಯ ನೆನಪಾಗುವಷ್ಟು ಮಟ್ಟಿಗೆ ಇರೋಮ್ ಪ್ರತಿಭಟನೆ ವಿಶ್ವಾದ್ಯಂತ ಜನಪ್ರಿಯವಾಗಿದೆ.
ಸದ್ಯ ಕಾಶ್ಮೀರದಲ್ಲಿ ಆಫ್‌ಸ್ಪಾ ತನ್ನ ರೌದ್ರಾವತಾರವನ್ನು ನಡೆಸುತ್ತಿರುವಾಗಲೇ ಇರೋಮ್ ಶರ್ಮಿಳಾ ತನ್ನ ಉಪವಾಸವನ್ನು ಕೊನೆಗೊಳಿಸಿದ್ದಾರೆ. ದೇಶದ ಇತಿಹಾಸದಲ್ಲಿ ಈ ಉಪವಾಸ ಸತ್ಯಾಗ್ರಹದ ಕೊನೆಯೂ ಗಮನಾರ್ಹವಾದುದೇ ಆಗಿದೆ. ಒಂದೆಡೆ ಈಶಾನ್ಯ ಭಾರತದ ಕೆಲ ಸಂಘಟನೆಗಳು, ವ್ಯವಸ್ಥೆಯ ವಿರುದ್ಧ ಹಿಂಸಾತ್ಮಕ ಹೋರಾಟಕ್ಕೆ ಇಳಿದಿವೆ. ಅನ್ಯಾಯಕ್ಕೊಳಗಾದ ಬಡಜನರು, ಆದಿವಾಸಿಗಳು ನಕ್ಸಲೀಯರಾಗುತ್ತಿದ್ದಾರೆ. ಕಾಶ್ಮೀರವೂ ಇದಕ್ಕೆ ಹೊರತಲ್ಲ. ಇದೇ ಹೊತ್ತಿನಲ್ಲಿ ಕಾಶ್ಮೀರದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಸತ್ತಾತ್ಮಕವಾಗಿ ಹೋರಾಡಿ ಎಂದು ಹೇಳಿದ್ದಾರೆ. ‘‘ಕಲ್ಲುಗಳನ್ನು ಎತ್ತಿಕೊಳ್ಳುವ ಬದಲು, ಪೆನ್ನು, ಲ್ಯಾಪ್‌ಟ್ಯಾಪ್‌ಗಳನ್ನು ಬಳಸಿ’’ ಎಂದೂ ಸಲಹೆ ನೀಡಿದ್ದಾರೆ. ಇರೋಮ್ ಶರ್ಮಿಳಾ ಕಳೆದ 16 ವರ್ಷಗಳಿಂದ ಕಲ್ಲು, ಕೋವಿ ಎತ್ತಿಕೊಂಡು ಪ್ರತಿಭಟನೆ ಮಾಡಲಿಲ್ಲ ಎನ್ನುವುದನ್ನು ಮೋದಿ ಗಮನಿಸಬೇಕಾಗಿದೆ ಮತ್ತು ಪ್ರಜಾಸತ್ತಾತ್ಮಕವಾಗಿ ನಡೆಸಿದ ಅವರ ಹೋರಾಟವನ್ನು ಗೌರವಿಸಬೇಕಾಗಿದೆ. ಈಶಾನ್ಯ ಭಾರತಕ್ಕೆ ತೆರಳಿ ಮಾತನಾಡಿದಾಗ, ಹಿಂಸೆ ಬೇಡ ಎಂದು ಉಗ್ರವಾದಿಗಳಿಗೆ ಕರೆ ನೀಡಿರುವ ನರೇಂದ್ರ ಮೋದಿ, ಇದೇ ಸಂದರ್ಭದಲ್ಲಿ ಈಶಾನ್ಯ ಭಾರತವೂ ಸೇರಿದಂತೆ ದೇಶದೆಲ್ಲೆಡೆ ನಡೆಯುತ್ತಿರುವ ಪ್ರಜಾಸತ್ತಾತ್ಮಕವಾದ ಹೋರಾಟವನ್ನು ಹೇಗೆ ಬಗ್ಗು ಬಡಿಯಲಾಗುತ್ತಿದೆ ಎನ್ನುವುದನ್ನೂ ಗಮನಿಸಿದಂತಿಲ್ಲ. ಪ್ರಜಾಸತ್ತಾತ್ಮಕವಾದ ಹೋರಾಟಗಳು ವಿಫಲವಾದಾಗ ಮಾತ್ರ ಜನರು ಬೇರೆ ದಾರಿಗಳನ್ನು ಹುಡುಕುತ್ತಾರೆ. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಎಲ್ಲಿಯವರೆಗೆ ಪಶ್ಚಿಮಘಟ್ಟದಲ್ಲಿ ನಕ್ಸಲೀಯ ಚಳವಳಿ ಆರಂಭವಾಗಿರಲಿಲ್ಲವೋ ಅಲ್ಲಿಯವರೆಗೆ ಆ ಭಾಗದ ಬುಡಕಟ್ಟು ಜನರ ಬಗ್ಗೆ, ಗ್ರಾಮೀಣ ಪ್ರದೇಶಗಳ ಬಗ್ಗೆ ಸರಕಾರ ಗಮನವನ್ನೇ ಹರಿಸಿರಲಿಲ್ಲ. ಯಾವಾಗ ನಕ್ಸಲೀಯರು ಆ ಭಾಗದಲ್ಲಿ ಹೆಚ್ಚಳವಾದರೋ ತಕ್ಷಣ ಸರಕಾರ ಜಾಗೃತವಾಯಿತು. ನಕ್ಸಲರನ್ನು ದಮನ ಮಾಡುವ ದೃಷ್ಟಿಯಿಂದ ಆ ಭಾಗವನ್ನು ನಕ್ಸಲ್ ಪೀಡಿತ ಎಂದು ಕರೆದು, ಅಲ್ಲಿಗೆ ಪ್ಯಾಕೇಜ್‌ಗಳನ್ನು ಘೋಷಿಸಿತು. ಇದು ಜನರಿಗೆ ಯಾವ ಸಂದೇಶವನ್ನು ನೀಡುತ್ತದೆ? ಪ್ರಜಾಸತ್ತಾತ್ಮಕ ಚಳವಳಿಯನ್ನು ನಾಶ ಮಾಡುತ್ತಿರುವುದು ಮತ್ತು ಪರೋಕ್ಷವಾಗಿ ಉಗ್ರವಾದಿ ಹೋರಾಟಕ್ಕೆ ಪ್ರೇರಣೆ ನೀಡುತ್ತಿರುವವರು ಯಾರು?
ಇರೋಮ್ ಶರ್ಮಿಳಾ ಕಳೆದ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡಿ ಆಸ್ಪತ್ರೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಅವರನ್ನು ಎಷ್ಟು ಪ್ರಧಾನ ಮಂತ್ರಿಗಳು ಭೇಟಿ ಮಾಡಿದರು? ಕಲ್ಲು ಬೇಡ, ಲ್ಯಾಪ್‌ಟಾಪ್ ಕೈಗೆತ್ತಿಕೊಳ್ಳಿ ಎನ್ನುವ ನರೇಂದ್ರ ಮೋದಿಯವರು ಇರೋಮ್ ಶರ್ಮಿಳಾ ಅವರನ್ನು ಭೇಟಿ ಮಾಡಿ ಯಾಕೆ ಅವರಿಗೆ ಸಾಂತ್ವನ, ಭರವಸೆಯನ್ನು ನೀಡಲಿಲ್ಲ? ಇರೋಮ್ ಶರ್ಮಿಳಾ ಅವರ ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಗೌರವಿಸಿದ್ದಿದ್ದರೆ, ಇಂತಹಅಹಿಂಸಾ ಹೋರಾಟ ದೇಶದಲ್ಲಿ ಹೆಚ್ಚು ಹೆಚ್ಚು ಬಲ ಪಡೆಯುತ್ತಿತ್ತು. ಇದೀಗ ಇರೋಮ್ ಶರ್ಮಿಳಾ ಅವರು ಕೊನೆಗೂ ತನ್ನ ಉಪವಾಸವನ್ನು ತೊರೆದಿದ್ದಾರೆ. ಈ ಸಂದರ್ಭದಲ್ಲಿ ಅವರ ಇಷ್ಟು ದಿನಗಳ ಉಪವಾಸವನ್ನು, ಬೇಡಿಕೆಯನ್ನು ಗೌರವಿಸುವುದು ಸರಕಾರದ ಕರ್ತವ್ಯವಾಗಿದೆ. ಪಕ್ಕದ ಕಾಶ್ಮೀರದಲ್ಲಿಯೂ ಸೇನೆಗೆ ಅಲ್ಲಿಯ ಜನರ ಧ್ವನಿಯನ್ನು ಅಡಗಿಸಲು ಸಾಧ್ಯವಾಗಿಲ್ಲ. ಸೇನೆಯ ವಿಶೇಷಾಧಿಕಾರ ಕಾಶ್ಮೀರಿಗಳ ಭಾವನೆಗಳನ್ನು ಇಷ್ಟು ಘಾಸಿಗೊಳಿಸಿ ಅವರನ್ನು ಭಾರತದಿಂದ ದೂರ ಮಾಡುತ್ತಿದೆ. ಕೋವಿಯ ಮೂಲಕ ಉಗ್ರರನ್ನು ಸಾಯಿಸಬಹುದು. ಆದರೆ ಅಲ್ಲಿನ ಜನರ ಧ್ವನಿಯನ್ನು ಸಾಯಿಸಲು ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು. ‘ಕಾಶ್ಮೀರವೂ ಸ್ವಾತಂತ್ರದ ಸವಿಯನ್ನು ಅನುಭವಿಸಬೇಕು’ ಎಂದು ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಸೇನೆಯ ಕೋವಿ ಮತ್ತು ಕರ್ಫ್ಯೂಗಳ ನಡುವೆ ಕಾಶ್ಮೀರ, ಮಣಿಪುರದಂತಹ ರಾಜ್ಯಗಳು ಸ್ವಾತಂತ್ರದ ಸವಿಯನ್ನು ಅನುಭವಿಸುವುದು ಹೇಗೆ?
ಈ ಹಿನ್ನೆಲೆಯಲ್ಲಿ ಸೇನಾ ವಿಶೇಷಾಧಿಕಾರದ ಕುರಿತಂತೆ ಒಂದು ನಿರ್ಧಾರವನ್ನು ತಳೆಯಲು ನರೇಂದ್ರ ಮೋದಿಯವರಿಗೆ ಇದು ಸುಸಂದರ್ಭವಾಗಿದೆ. ಇರೋಮ್ ಶರ್ಮಿಳಾ ಪ್ರಜಾಸತ್ತೆಯ ಮೇಲೆ ನಂಬಿಕೆಯಿಟ್ಟು ಉಪವಾಸಗೈದರು ಹಾಗೂ ಅದೇ ಪ್ರಜಾಸತ್ತೆಯ ಮೇಲೆ ನಂಬಿಕೆಯಿಟ್ಟೇ ಉಪವಾಸವನ್ನು ಅವರು ತೊರೆದಿದ್ದಾರೆ. ಆಕೆ ಈ ದೇಶದ ಸರ್ವ ನಾಗರಿಕರ ಪ್ರತಿನಿಧಿಯಾಗಿದ್ದಾರೆ. ಮಣಿಪುರ ಹಾಗೂ ಕಾಶ್ಮೀರದ ಮೇಲೆ ಹೇರಿರುವ ಸೇನೆಯನ್ನು ಹಂತಹಂತವಾಗಿ ಹಿಂದೆಗೆಯುವ ಭರವಸೆಯನ್ನು ಸರಕಾರ ತಕ್ಷಣ ನೀಡಬೇಕು. ಜೊತೆಗೆ ಕೋವಿಯ ಬದಲಿಗೆ ಹೃದಯದಿಂದ ಆ ಭಾಗದ ಜನರನ್ನು ಗೆಲ್ಲಬೇಕು. ಇದೇ ಸಂದರ್ಭದಲ್ಲಿ ಇರೋಮ್ ಶರ್ಮಿಳಾ ತನಗೆ ಸಿಕ್ಕಿರುವ ಅಪಾರ ಜನಪ್ರಿಯತೆಯನ್ನು ರಾಜಕೀಯವಾಗಿ ನಗದೀಕರಿಸಿಕೊಂಡು ಮಣಿಪುರದ ಪರವಾದ ಹೋರಾಟವನ್ನು ಇನ್ನಷ್ಟು ಬಲಪಡಿಸಬೇಕು. ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಕನಸನ್ನು ಇರೋಮ್ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಇದು ಅಷ್ಟು ಸುಲಭವೇನೂ ಅಲ್ಲ. ಆದರೆ ಜನರ ಜೊತೆಗೆ ಹೆಜ್ಜೆಯಿಟ್ಟರೆ ಅದು ಅಸಾಧ್ಯವಾದ ವಿಷಯವೂ ಅಲ್ಲ.







