ಪಾರಂಪರಿಕ ಅರಣ್ಯ ಕಾನೂನು ಅನುಷ್ಠಾನಕ್ಕೆ ಹೊಸ ಮಾರ್ಗಸೂಚಿ

ಬೆಂಗಳೂರು, ಆ.9: ಪಾರಂಪರಿಕ ಅರಣ್ಯ ಕಾನೂನನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಹೊಸ ಮಾರ್ಗ ಸೂಚಿಗಳನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರವು ಯಾವ ಉದ್ದೇಶವನ್ನಿಟ್ಟುಕೊಂಡು ಈ ಕಾನೂನು ಜಾರಿಗೆ ತಂದಿದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಈ ಕಾನೂನಿನ ಯಶಸ್ವಿ ಅನುಷ್ಠಾನಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದರು.
ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಮಡಿಕೇರಿ, ಬೆಳಗಾವಿ, ಚಾಮರಾಜ ನಗರ ಸೇರಿದಂತೆ ಇನ್ನಿತರ ಜಿಲ್ಲೆಗಳು ಪಾರಂಪರಿಕ ಅರಣ್ಯ ಕಾನೂನಿನಡಿನಲ್ಲಿ ಬರುತ್ತವೆ. ವಿವಿಧ ಕಾರಣಗಳಿಂದಾಗಿ ಅರ್ಜಿಗಳು ತಿರಸ್ಕೃತಗೊಂಡಿದ್ದರೆ, ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಮ್ಮಪ್ಪ ಹೇಳಿದರು.
ಬಗರ್‌ಹುಕುಂ ಸಾಗುವಳಿ ಸಮಸ್ಯೆಯನ್ನು ಡಿಸೆಂಬರ್ ಅಂತ್ಯಕ್ಕೆ ಈಡೇರಿಸುವ ಉದ್ದೇಶವಿದೆ. ಸಮಿತಿಗಳು ವಾರಕ್ಕೊಮ್ಮೆ ಸಭೆ ಸೇರಲೆಬೇಕು ಎಂದು ನಿರ್ದೇಶನ ನೀಡಲಾಗಿದೆ. ಜನರಿಗೆ ನೆಮ್ಮದಿಯಾಗಿ ಬದುಕುವ ವಾತಾವರಣ ಕಲ್ಪಿಸಬೇಕು. ಇದಕ್ಕಾಗಿ ಆಡಳಿತ ನಡೆಸುವವರಲ್ಲಿ ಬದ್ಧತೆಯಿರಬೇಕು ಎಂದು ಅವರು ತಿಳಿಸಿದರು.
ಹೈದರಬಾದ್-ಕರ್ನಾಟಕ ಭಾಗ, ದಾವಣಗೆರೆಯಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಆ.11ರಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದೇನೆ. ಆನಂತರ ಮೈಸೂರು ವಿಭಾಗದಲ್ಲಿ ಪ್ರವಾಸ ಕೈಗೊಂಡು ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲನೆ ನಡೆಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಬಗರ್‌ಹುಕುಂ ಸಾಗುವಳಿ ಅಡಿಯಲ್ಲಿ ಈವರೆಗೆ ಎಂಟು ಸಾವಿರ ಎಕರೆ ಮಾತ್ರ ಮಂಜೂರಾಗಿದೆ. ಈ ಪೈಕಿ ಬಹುಪಾಲು ಎಸ್ಸಿ-ಎಸ್ಟಿ ಸಮು ದಾಯದವರಿಗೆ ಸೇರಿದೆ. ಸುಮಾರು 6-7 ಲಕ್ಷ ಅರ್ಜಿಗಳು ಬಂದಿವೆ. ಈ ಎಲ್ಲ ಅರ್ಜಿಗಳ ವಿಲೇವಾರಿಗೆ 10-15 ಲಕ್ಷ ಎಕರೆ ಭೂಮಿ ಬೇಕಾಗು ತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಬಗರ್‌ಹುಕುಂ, 94‘ಸಿ’ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿ ಯಾಗುವವರೆಗೆ ಒತ್ತುವರಿ ತೆರವು ಕಾರ್ಯವನ್ನು ಕೈಗೊಳ್ಳುವುದಿಲ್ಲ. ಸರಕಾರಿ ಭೂಮಿ ಒತ್ತುವರಿಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಆದುದರಿಂದ, ಗ್ರಾಮ ಲೆಕ್ಕಿಗರು ಇನ್ನುಮುಂದೆ ತಮ್ಮ ಕಾರ್ಯಕ್ಷೇತ್ರದಲ್ಲೆ ವಾಸವಿರುವಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.





