ಹಿಜಾಬ್ ಧರಿಸಿದ ಅಮೆರಿಕದ ಮೊದಲ ಅಥ್ಲೀಟ್ ಇಬ್ತಿಹಾಜ್ ಮುಹಮ್ಮದ್
ಬ್ರೆಝಿಲ್‌ಗೆ ಮೊದಲ ಚಿನ್ನ ಗೆದ್ದುಕೊಟ್ಟ ರಫೆಲ್ ಸಿಲ್ವಾ

ರಿಯೊ ಡಿ ಜನೈರೊ, ಆ.9: ರಿಯೋ ಒಲಿಂಪಿಕ್ಸ್‌ನ ಮೂರನೆ ದಿನವಾದ ಸೋಮವಾರ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ರಫೆಲ್ ಸಿಲ್ವಾ ಆತಿಥೇಯ ಬ್ರೆಝಿಲ್‌ಗೆ ರಿಯೋ ಗೇಮ್ಸ್‌ನಲ್ಲಿ ಮೊದಲ ಚಿನ್ನ ಗೆದ್ದುಕೊಟ್ಟರೆ, ಕತ್ತಿವರಸೆಯಲ್ಲಿ ಇಬ್ತಿಹಾಜ್ ಮುಹಮ್ಮದ್ ಹಿಜಾಬ್ ಧರಿಸಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಅಮೆರಿಕದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ.
ಅಮೆರಿಕದ ಲಿಲ್ಲಿ ಕಿಂಗ್ ಸೋಮವಾರ ರಾತ್ರಿ ನಡೆದ 100 ಮೀ. ಬ್ರಿಸ್ಟ್ರೋಕ್‌ನಲ್ಲಿ ರಶ್ಯದ ಯೂನಿಯಾ ಎಫಿಮೊವಾರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಜಯಿಸಿದರು. ಈ ಹಿಂದೆ ಡೋಪಿಂಗ್ ಹಗರಣದಲ್ಲಿ ಸಿಕ್ಕಿಬಿದ್ದು ನಿಷೇಧವನ್ನು ಎದುರಿಸಿದ್ದ ಅಮೆರಿಕದ ಈಜುಗಾರ್ತಿ ಲಿಲ್ಲಿ ಕಿಂಗ್ 100 ಮೀ. ಬ್ರಿಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಅಮೆರಿಕದ ಪುರುಷರ ಬಾಸ್ಕೆಟ್‌ಬಾಲ್ ತಂಡ ಮಂದಗತಿಯ ಆರಂಭ ಪಡೆದಿದ್ದರೂ ವೆನೆಝುಯೆಲಾ ತಂಡವನ್ನು 113-69 ಅಂಕಗಳ ಅಂತರದಿಂದ ಮಣಿಸಿತು. ಸಿಂಗಲ್ಸ್‌ನಲ್ಲಿ ಸತತ ಎರಡನೆ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಫ್ರಾನ್ಸ್‌ನ ಅಲಿಝ್ ಕಾರ್ನೆಟ್ ವಿರುದ್ಧ 7-6(5), 6-2 ಸೆಟ್‌ಗಳ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದರು.
ಬ್ರೆಝಿಲ್‌ನ ರಫೆಲ್ ಸಿಲ್ವಾ 57 ಕಿ.ಗ್ರಾಂ ವಿಭಾಗದಲ್ಲಿ ಜುಡೋ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಬ್ರೆಝಿಲ್‌ನ ಫುಟ್ಬಾಲ್ ತಂಡ ತವರಿನಲ್ಲಿ ನಡೆಯುತ್ತಿರುವ ರಿಯೋ ಗೇಮ್ಸ್‌ನಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಡೆನ್ಮಾರ್ಕ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ನೇಮರ್ ನೇತೃತ್ವದ ಪುರುಷರ ಫುಟ್ಬಾಲ್ ತಂಡ ವಾರಾಂತ್ಯದಲ್ಲಿ ನಡೆದ ಇರಾಕ್ ವಿರುದ್ಧದ ಪಂದ್ಯವನ್ನು ಗೋಲುರಹಿತ ಡ್ರಾಗೊಳಿಸಿತ್ತು. ಇದೀಗ ಬ್ರೆಝಿಲ್ ತಂಡ ಒಲಿಂಪಿಕ್ಸ್‌ನಿಂದ ಬೇಗನೆ ನಿರ್ಗಮಿಸುವ ಭೀತಿಯಲ್ಲಿದೆ.
ಮಹಿಳೆಯರ ಕತ್ತಿವರಸೆ ಸ್ಪರ್ಧೆಯಲ್ಲಿ ಇಬ್ತಿಹಾಜ್ ಮುಹಮ್ಮದ್ ಕಪ್ಪು ಹಿಜಾಬ್ ಧರಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಇಬ್ತಿಹಾಜ್ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದರು, ಆದರೆ, ಎರಡನೆ ಸುತ್ತಿನಲ್ಲಿ ಸೋತು ಸ್ಪರ್ಧೆಯಿಂದ ಹೊರ ನಡೆದರು. ಮುಹಮ್ಮದ್ ಈ ವಾರಾಂತ್ಯದಲ್ಲಿ ಟೀಮ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಆಸ್ಟ್ರೇಲಿಯ ತಂಡ ಒಲಿಂಪಿಕ್ಸ್‌ನಲ್ಲಿ ರಗ್ಬಿ ಸೆವೆನ್‌ನಲ್ಲಿ ಮೊದಲ ಬಾರಿ ಚಿನ್ನದ ಪದಕ ಜಯಿಸಿದೆ. ಸೋಮವಾರ ರಾತ್ರಿ ನಡೆದ ಮಹಿಳೆಯರ ರಗ್ಬಿ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡ ನ್ಯೂಝಿಲೆಂಡ್‌ನ್ನು 24-17 ಅಂತರದಿಂದ ಮಣಿಸಿತು.
ಒಲಿಂಪಿಕ್ಸ್‌ಗೆ ಮರಳಿದ ಗಾಲ್ಫ್: ಸುಮಾರು 112 ವರ್ಷಗಳ ಬಳಿಕ ಗಾಲ್ಫ್ ಒಲಿಂಪಿಕ್ಸ್‌ಗೆ ವಾಪಸಾಗಿದೆ. ಬ್ರೆಝಿಲ್‌ನ ಅಡಿಲ್‌ಸನ್ ಡಿ ಸಿಲ್ವಾ ಪುರುಷರ ವಿಭಾಗದಲ್ಲಿ ಸ್ಪರ್ಧೆಗಿಳಿದರು.







