ತೆರವಾಗಿದ್ದ ಜಾಗದ ಸರ್ವೇ: ಹಲವೆಡೆ ಅಧಿಕಾರಿಗಳೊಂದಿಗೆ ವಾಗ್ವಾದ
4ನೆ ದಿನವೂ ಮುಂದುವರಿದ ತೆರವು ಕಾರ್ಯಾಚರಣೆ

ಬೆಂಗಳೂರು, ಆ.9: ನಗರದಲ್ಲಿ ಕಳೆದ ಮೂರು ದಿನ ಗಳಿಂದ ನಡೆಯುತ್ತಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಾಲ್ಕನೆ ದಿನವೂ ಮುಂದುವರಿದ್ದು, ಕೆಲವು ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ಹಲವೆಡೆ ಒತ್ತುವರಿಯಾಗಿದ್ದ ಜಾಗದ ಬಗ್ಗೆ ಸರ್ವೇ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಭೀತಿಗೊಳಗಾದ ನಿವಾಸಿಗಳು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.
ನಗರದ ಬೊಮ್ಮನಹಳ್ಳಿ ಬಳಿಯ ಕೈಕೊಂಡಹಳ್ಳಿಯಲ್ಲಿ ಮುಂಜಾನೆಯೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸ ಲಾಯಿತು. ಈ ಸಂದರ್ಭದಲ್ಲಿ ಮನೆ ಮಾಲಕರು ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಮಧ್ಯಾಹ್ನದ ಹೊತ್ತಿಗೆ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಲಿದ್ದೇವೆ, ಅಲ್ಲಿಯವರೆಗೆ ಸಮಯ ನೀಡಿ. ನಾವೇ ನಮ್ಮ ಮನೆಗಳನ್ನು ತೆರವು ಮಾಡಿಕೊಡುತ್ತೇವೆ ಎಂದು ಮಾಲಕರು ಪರಿಪರಿಯಾಗಿ ಬೇಡಿಕೊಂಡರೂ, ಯಾವುದಕ್ಕೂ ಕ್ಯಾರೆ ಎನ್ನದೆ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ಒತ್ತುವರಿ ಜಾಗವನ್ನು ತೆರವು ಮಾಡಿದರು.
ಅರಕೆರೆ ವಾರ್ಡ್‌ನ ಅವನಿ ಶೃಂಗೇರಿ ನಗರದಲ್ಲಿ ರಾಜಕಾ ಲುವೆ ಒತ್ತುವರಿ ತೆರವು ಮಾಡಲಾಯಿತು. ಈ ಸಂದರ್ಭದಲ್ಲಿ ಇಲ್ಲಿನ ಕೆಲ ಮನೆ ಮಾಲಕರು ಒತ್ತುವರಿಯಾಗಿದ್ದ ಸ್ಥಳವನ್ನು ಜೆಸಿಬಿಯಿಂದ ತೆರವು ಮಾಡಿದರೆ ಇಡೀ ಮನೆ ಬಿದ್ದು ಹೋಗುತ್ತದೆ ಎಂದು ಮನೆ ಮಾಲಕರು ತಮ್ಮ ಸ್ವಂತ ಖರ್ಚಿನಿಂದಲೇ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿಕೊಟ್ಟ ಸಂಗತಿ ಇಂದಿಲ್ಲಿ ನಡೆಯಿತು. ನಂತರ ಶುಭ ಎನ್‌ಕ್ಲೇವ್ ಲೇಔಟ್ ಬಳಿ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಸ್ವಯಂ ತೆರವು ಮಾಡಿಕೊಳ್ಳಲು ಅನುಮತಿ ನೀಡುವಂತೆ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಪ್ರಸಂಗ ನಡೆಯಿತು. ಇದೇ ವೇಳೆಯಲ್ಲಿ ಕೆಲ ಸ್ಥಳೀಯ ನಿವಾಸಿಗಳು ಜೆಸಿಬಿಗಳಿಗೆ ಅಡ್ಡಬಂದು ಒತ್ತುವರಿ ತೆರವು ಮಾಡುವುದನ್ನು ತಡೆಯಲು ಯತ್ನಿಸಿದರಾದರೂ ಪೊಲೀಸರ ನೆರವು ಪಡೆದು ಅಧಿಕಾರಿಗಳು ತೆರವು ಪೂರ್ಣಗೊಳಿಸಿದರು.
ಯಲಹಂಕದ ದೊಡ್ಡಬೊಮ್ಮಸಂದ್ರದಲ್ಲಿ ಸುಮಾರು 30 ಕ್ಕೂ ಹೆಚ್ಚು ಮನೆಗಳು ಒತ್ತುವರಿಯಾಗಿರುವ ಜಾಗದಲ್ಲಿ ನಿರ್ಮಾಣವಾಗಿವೆ ಎಂದು ಸರ್ವೇ ಕಾರ್ಯನಡೆಸಿದ ಅಧಿಕಾರಿಗಳು ತಿಳಿಸಿದರು.
ಈ ವೇಳೆ ಇಲ್ಲಿನ ಕೆಲವು ಮನೆ ಮಾಲಕರು ‘ಇಲ್ಲಿ ಮನೆ ನಿರ್ಮಾಣ ಮಾಡುವ ಸಮಯದಲ್ಲಿ ಯಾವುದೇ ರಾಜಕಾಲುವೆ ಇರಲಿಲ್ಲ. ಈಗ ಸರ್ವೇ ಮಾಡಲು ಬಂದಿದ್ದೀರಾ’ ಎಂದು ಗಲಾಟೆ ಮಾಡಿದರು. ಸ್ಥಳಕ್ಕೆ ಡಿಸಿಪಿ ಬೋರಲಿಂಗಯ್ಯ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ಕೆಆರ್‌ಪುರಂ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಕೆಲವರು ಒಂದು ದಿನದ ಕಾಲಾವಕಾಶವನ್ನು ಕೋರಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.







