ರಾಜಕಾಲುವೆ ಮೇಲೆ ಮನೆಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಅಧಿಕಾರಿಗಳ ಪಟ್ಟಿ ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು, ಆ.9: ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆ ಮೇಲೆ ಮನೆಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಿದ ಅಧಿಕಾರಿಗಳ ಪಟ್ಟಿಯನ್ನು ನೀಡಲು ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ. ಈ ಸಂಬಂಧ ನಾಮಕೃಷ್ಣಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಲ್.ನಾರಾಯಣಸ್ವಾಮಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಕೀಲರು ವಾದಿಸಿ, ನಮ್ಮ ಕಕ್ಷಿದಾರರಿಗೆ ಬಿಬಿಎಂಪಿ ಅವರು ವರ್ತೂರು ಹೋಬಳಿ ವ್ಯಾಪ್ತಿಯ ವಾರ್ಡ್ ನಂಬರ್ 30ರ ಕಸವನಹಳ್ಳಿಯಲ್ಲಿ ಮನೆ ನಿರ್ಮಿಸಲು ಅವಕಾಶ ಕಲ್ಪಿಸಿದ್ದಾರೆ. ಆದರೆ, ಈಗ ನಿಮ್ಮ ಮನೆಯನ್ನು ರಾಜ ಕಾಲುವೆ ಮೇಲೆ ನಿರ್ಮಿಸಿದ್ದಿರಿ ಎಂದು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅಧಿಕಾರಿಗಳು ಜಾಗದ ಕಡತಗಳನ್ನು ಪರಿಶೀಲಿಸಿದ ಮೇಲೆಯೇ 30 ಕೋಟಿ ರೂ.ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಹೀಗಾಗಿ, ಮನೆ ತೆರವು ಕಾರ್ಯಾ ಚರಣೆಗೆ ಮಧ್ಯಾಂತರ ತಡೆ ನೀಡಬೇಕೆಂದು ನ್ಯಾಯಪೀಠಕ್ಕೆ ತಿಳಿಸಿದರು. ಸರಕಾರಿ ಪರ ವಕೀಲ ಎಜಿ ಕು
ಮಾರ್‌ನಾಯ್ಕ ವಾದ ಮಂಡಿಸಿ, ಬಿಬಿಎಂಪಿ ಅವರು ರಾಜಕಾಲುವೆ ಮೇಲೆ ನಿರ್ಮಿಸಿದ ಮನೆಗಳನ್ನು ಮಾತ್ರ ತೆರವುಗೊಳಿಸುತ್ತಿದೆ. ಈ ಬಗ್ಗೆ ಮೊದಲೇ ಮನೆ ಮಾಲಕರಿಗೆ ನೋಟಿಸ್‌ನ್ನು ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಬಿಬಿಎಂಪಿ ಕಾಯ್ದೆ ಪ್ರಕಾರವೇ ರಾಜಕಾಲುವೆ ಮೇಲೆ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿ ಸುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆ ಮೇಲೆ ಮನೆಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಿದ ಅಧಿಕಾರಿಗಳ ಪಟ್ಟಿಯನ್ನು ಮುಂದಿನ ವಿಚಾರಣೆ ವೇಳೆಯಲ್ಲಿ ನೀಡಬೇಕೆಂದು ಬಿಬಿಎಂಪಿಗೆ ಸೂಚನೆ ನೀಡಿತು. ವಿಚಾರಣೆಯನ್ನು ಆ.23ಕ್ಕೆ ಮುಂದೂಡಿತು.







