20 ಅಧಿಕಾರಿಗಳ ಮೇಲೆ ಕ್ರಮಕ್ಕೆ ಸಿಎಂ ಆದೇಶ
ರಾಜಕಾಲುವೆ ಒತ್ತುವರಿ ಪ್ರಕರಣ
ಬೆಂಗಳೂರು, ಆ.9: ರಾಜ ಕಾಲುವೆ ಒತ್ತುವರಿ ಸಂಬಂಧ 20 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಇದರಲ್ಲಿ 13 ಮಂದಿ ಹಾಲಿ ಮತ್ತು 7 ಮಂದಿ ನಿವೃತ್ತ ಅಧಿಕಾರಿಗಳು ಸೇರಿದ್ದಾರೆ. ಹಾಲಿ ಅಧಿಕಾರಿಗಳ ಅಮಾನತಿಗೂ ಸಿಎಂ ಆದೇಶಿಸಿದ್ದಾರೆ. ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಹಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಈ ಅಕ್ರಮ ನಿರ್ಮಾಣಗಳಿಗೆ ಸಹಕರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ರಾಜ ಕಾಲುವೆಗಳನು್ನ ಒತ್ತುವರಿ ಮಾಡಿ ನಿರ್ಮಿಸಿರುವ ಬಡಾ ವಣೆಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಸಹಕರಿಸಿದ ಆರೋಪ ಅಧಿಕಾರಿಗಳ ಮೇಲಿದೆ. ಜೊತೆಗೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳಿಗೆ ಈ ಅಧಿಕಾರಿಗಳು ನಕ್ಷೆ ಮಂಜೂರು ಮಾಡಿದ್ದಾರೆ. ಖಾತಾ ಸಹ ಮಾಡಿಕೊಟ್ಟಿದ್ದಾರೆ.
ಇತ್ತೀಚೆಗೆ ಭಾರೀ ಮಳೆಯಿಂದಾಗಿ ಅನಾಹುತ ಸಂಭವಿಸಿದಾಗ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿಯವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಜೊತೆಗೆ ಅಕ್ರಮ ನಿರ್ಮಾಣಗಳಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದರು.





