ಸಹಕಾರಿ ಪುಸ್ತಕ ಪ್ರಕಾಶನ ಸಂಘಕ್ಕೆ ಆರ್ಥಿಕ ನೆರವು: ಬಂಜಗೆರೆ
‘ಪ್ರಥಮ ಮಹಿಳಾ ಪುಸ್ತಕ ಪ್ರಕಾಶನ’ ಕಾರ್ಯಾಗಾರ

ಬೆಂಗಳೂರು, ಆ.9: ಕರ್ನಾಟಕ ಲೇಖಕಿಯರ ಸಂಘದ ನೇತೃತ್ವ ದಲ್ಲಿ ಪ್ರತಿ ಜಿಲ್ಲೆಯಲ್ಲಿ ಸಹಕಾರಿ ಪುಸ್ತಕ ಪ್ರಕಾಶನ ಸಂಘಗಳನ್ನು ಸ್ಥಾಪಿಸಿದರೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕರ್ನಾಟಕ ಲೇಖಕಿಯರ ಸಂಘ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ರಾಜ್ಯ ವಿಜ್ಞಾನ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಪ್ರಥಮ ಮಹಿಳಾ ಪುಸ್ತಕ ಪ್ರಕಾಶನ ಕಾರ್ಯಾಗಾರ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳಾ ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಹೀಗಾಗಿ ನಾನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾದ ಪ್ರಾರಂಭದಲ್ಲೆ ಕರ್ನಾಟಕ ಲೇಖಕಿಯರ ಸಂಘಕ್ಕೆ 15ಲಕ್ಷ ರೂ. ನೀಡಿ, ಅದರ ಮೂಲಕ ಪ್ರತಿ ಜಿಲ್ಲೆಯಲ್ಲಿ ಸಹಕಾರಿ ಪುಸ್ತಕ ಸಂಘಗಳನ್ನು ಸ್ಥಾಪಿಸುವ ಉದ್ದೇಶವಿತ್ತು. ಆದರೆ, ಅಧಿಕಾರಿಗಳು ಸಮ್ಮತಿ ನೀಡ ಲು ಹಿಂಜರಿಯುತ್ತಿರುವುದರಿಂದ ಜಾರಿಯಾಗುತ್ತಿಲ್ಲ. ಈಗ ಮತ್ತೊಮ್ಮೆ ಆ ಯೋಜನೆಯನ್ನು ಜಾರಿ ಮಾ ಡಲು ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳೆಯರು ವ್ಯವಹಾರದಲ್ಲಿ ವಿಶ್ವಾಸಾರ್ಹರು ಹಾೂ ಪ್ರಾಮಾಣಿಕರಾಗಿರುತ್ತಾರೆ. ಹೀಗಾಗಿ ಅವರು ಉದ್ಯಮ ಕ್ಷೇತ್ರಕ್ಕೆ ಬಂದರೆ ಯಶಸ್ವಿಯಾಗು ವಲ್ಲಿ ಯಾವುದೇ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಮಹಿಳೆಯರು ಒಂದು ಸಹಕಾರಿ ಪುಸ್ತಕ ಮಳಿಗೆಯನ್ನು ಸ್ಥಾಪಿಸಿದರೆ ಕನ್ನಡ ಪುಸ್ತಕ ಪ್ರಾಧಿಕಾರ ಆರ್ಥಿಕ ನೆರವು ನೀಡಲು ಸಿದ್ಧವಿದೆ ಎಂದು ಜಯಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪುಸ್ತಕ ಸಂಸ್ಕೃತಿಗೆ ಸಾವಿಲ್ಲ. ಹೀಗಾಗಿ ವಿವಿಧ ಜ್ಞಾನಶಾಖೆಗಳಿಗೆ ಸಂಬಂಧಿಸಿದಂತಹ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಜ್ಞಾನವನ್ನು ಪಸರಿಸಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದ ಒಂದು ವರ್ಷಕ್ಕೆ ಆರು ಸಾವಿರ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಆ ಪುಸ್ತಕಗಳ ಮುಖಪುಟ ಆಕರ್ಷಕವಾಗಿರುತ್ತವೆ. ಆದರೆ, ಪುಸ್ತಕದ ಒಳಗಡೆ ಯಾವುದೆ ಸಾರಾಂಶವಿರುವುದಿಲ್ಲ. ಬಹುತೇಕ ಕೃತಿಗಳು ನಿಸಾರವಾಗಿ, ಕೇವಲ ಹಣ ಮಾಡುವುದಕ್ಕಾಗಿಯೆ ಪ್ರಕಟಗೊಂಡಿರುತ್ತವೆ ಎಂದು ವಿಷಾದ ವ್ಯಕ್ತಪಡಿಸಿದರು.
ಪುಸ್ತಕ ಪ್ರಕಾಶಕರು ಉತ್ಕೃಷ್ಟವಾದ ಪುಸ್ತಕ ಗಳನ್ನು ಪ್ರಕಟಿಸುವ ಮೂಲಕ ಸಾಮಾಜಿಕ ಜವಾ ಬ್ದಾರಿಯನ್ನು ನಿಭಾಯಿಸಬೇಕು. ಇಂದಿಗೂ ಸಮಾಜಕ್ಕೆ ಅಗತ್ಯವಾದ ಅನೇಕ ವಿಷಯಗಳು ಪುಸ್ತಕ ರೂಪದಲ್ಲಿ ಹೊರತರಲಾಗಿಲ್ಲ. ಇವೆಲ್ಲ ವಿಷಯಗಳನ್ನು ಸೃಜ ನಾತ್ಮಕ ಬರಹಗಾರರಿಂದ ಬರೆಸಿ ಪ್ರಕಟಿಸಬೇಕು ಎಂದು ಅವರು ಆಶಿಸಿದರು.
ಪ್ರಕಾಶಕಿ ಹಾಗೂ ಹಿರಿಯ ಪತ್ರಕರ್ತೆ ವಿಜಯಾ ಮಾತನಾಡಿ, ಪುಸ್ತಕ ಪ್ರಕಾಶನ ವೃತ್ತಿ ಸುಲಭದ ಕೆಲಸವಲ್ಲ. ಎಷ್ಟೆ ಜಾಗರೂಕರಾಗಿದ್ದರೂ ತಪ್ಪುಗಳಾ ಗುತ್ತವೆ. ಹೀಗಾಗಿ ಅತ್ಯಂತ ಜಾಣ್ಮೆಯಿಂದ ಹಸ್ತಪ್ರತಿಗಳ ಆಯ್ಕೆ, ಕರಡು ತಿದ್ದುವುದು ಹಾಗೂ ಲೇಖಕರೊಂದಿಗೆ ಸೌಹಾರ್ದ ಸಂಬಂಧ ಇವೆಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದರೆ ಮಾತ್ರ ಯಶ್ವಸಿ ಪುಸ್ತಕ ಪ್ರಕಾಶಕರಾಗಲು ಸಾಧ್ಯವೆಂದು ತಿಳಿಸಿದರು.
ಈ ವೇಳೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಉಪಸ್ಥಿತರಿದ್ದರು.
ಇತ್ತೀಚಿನ ದಿನಗಳಲ್ಲಿ ಪ್ರಕಾಶನ ಹಾಗೂ ಮುದ್ರಣ ಕ್ಷೇತ್ರವು ಉದ್ಯಮವಾಗಿ ರೂಪಾಂತರಗೊಂಡಿದೆ. ಆದರೆ, ಈ ಉದ್ಯಮವನ್ನು ನಡೆಸಲು ಬೇಕಾದಂತಹ ತರಬೇತಿಯಾಗಲಿ, ಶಿಕ್ಷಣವಾಗಲಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಕಾಶನ ಹಾಗೂ ಮುದ್ರಣಕ್ಕೆ ಸಂಬಂಧಿಸಿದಂತೆ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು.
-ವಸುಂಧರಾ ಭೂಪತಿ, ಅಧ್ಯಕ್ಷೆ, ಕರ್ನಾಟಕ ಲೇಖಕಿಯರ ಸಂಘ





