ಪ್ರತಿ ದಿನ ಸಂತುಲಿತ ಪೌಷ್ಠಿಕ ಆಹಾರ ‘ಸೇವಿಸುತ್ತಿದ್ದ’ ಉಪವಾಸಿ ಇರೋಮ್ ಶರ್ಮಿಳಾ

ಇಂಫಾಲ್, ಆ.10: ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಕಳೆದ 16 ವರ್ಷಗಳಿಂದ ಉಪವಾಸದಿಂದಿದ್ದ ಮಣಿಪುರದ ಉಕ್ಕಿನ ಮಹಿಳೆಯೆಂದೇ ಖ್ಯಾತರಾಗಿದ್ದ ಇರೋಮ್ ಶರ್ಮಿಳಾ ಇತ್ತೀಚೆಗೆ ತನ್ನ ಸುದೀರ್ಘ ಉಪವಾಸವನ್ನು ಕೈಬಿಟ್ಟರಾದರೂ ಅವರಿಗೆ ಇಷ್ಟು ವರ್ಷಗಳ ಕಾಲವೂ ಪ್ರತಿದಿನ ಸಂತುಲಿತ ಆಹಾರವನ್ನು ಮೂಗಿಗೆ ಅಳವಡಿಸಿದ ನಳಿಕೆ ಮೂಲಕ ನೀಡಲಾಗುತ್ತಿತ್ತು.
ಮಣಿಪುರ ಸರಕಾರ ಪ್ರತಿ ತಿಂಗಳು ಅವರ ವಿಟಮಿನ್ ಹಾಗೂ ಮಿನರಲ್‌ಯುಕ್ತ ಸಮೃದ್ಧ ಆಹಾರಕ್ಕಾಗಿ ಕನಿಷ್ಠ 10,000 ರೂ. ವ್ಯಯ ಮಾಡಿತ್ತು.
‘‘ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಕೂಡ ತಿನ್ನದಂತಹ ಸಂತುಲಿತ ಆಹಾರವನ್ನು ಆಕೆಗೆ ಪ್ರತಿ ದಿನ ಮೂರು ಬಾರಿ ನೀಡಲಾಗುತ್ತಿತ್ತು’’ಎಂದು ಆಕೆಯನ್ನು ನೋಡಿಕೊಳ್ಳುತ್ತಿದ್ದ ಇಂಫಾಲ್‌ನ ಜವಾಹರ್‌ಲಾಲ್ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ವೈದ್ಯರು ಹೇಳುತ್ತಾರೆ.
ಆಕೆ ಉಪವಾಸ ಕೈಬಿಡುವ ತನಕ ಐದು ಮಂದಿ ವೈದ್ಯರು, 12 ನರ್ಸುಗಳು, ಮೂವರು ಮಹಿಳಾ ಪೊಲೀಸರು, ಎರಡು ಮೆಡಿಕಲ್ ಸೂಪರ್‌ವೈಸರ್‌ಗಳು ಸೇರಿದಂತೆ ಕನಿಷ್ಠ 40 ಮಂದಿ ಆಕೆಯ ಸೇವೆಯಲ್ಲಿದ್ದರು.
‘‘ಆಕೆಯ ಮೂತ್ರ, ಮಲ ಹಾಗೂ ರಕ್ತ ಹಾಗೂ ಇಸಿಜಿ ತಪಾಸಣೆ ನಿಯಮಿತವಾಗಿ ನಡೆಸಲಾಗುತ್ತಿತ್ತು’’ಎಂದೂ ಮಾಹಿತಿ ನೀಡಿದ ವೈದ್ಯರು ಕೆಲವೊಮ್ಮೆ ಆಕೆಯ ಮೂಡ್ ಕೆಟ್ಟದ್ದಾಗಿದ್ದಾಗ ಆಕೆಯನ್ನು ನಿಭಾಯಿಸುವುದು ಕಷ್ಟಕರವಾಗಿತ್ತು ಎಂದು ನೆನಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಆಕೆ ತನ್ನ ಮೂಗಿಗೆ ಅಳವಡಿಸಲಾಗಿದ್ದ ನಳಿಕೆಯನ್ನು ಕಿತ್ತೊಗೆಯುತ್ತಿದ್ದರು. ಆಗ ಆಕೆಗೆ ಗ್ಲುಕೋಸ್ ಡ್ರಿಪ್ಸ್ ನೀಡುವುದು ಅನಿವಾರ್ಯವಾಗುತ್ತಿತ್ತು, ಎಂದು ಅವರು ತಿಳಿಸಿದರು. ಶರ್ಮಿಳಾ ಪ್ರತಿ ದಿನ ಕನಿಷ್ಠ ನಾಲ್ಕು ಗಂಟೆಗಳ ಕಾಲ ಯೋಗಾಭ್ಯಾಸ ಮಾಡುತ್ತಿದ್ದರು. ತನ್ನ ವಾರ್ಡಿನ ಹೊರಗಿನ ಕಾರಿಡಾರಿನಲ್ಲಿ ನಡೆದಾಡುತ್ತಿದ್ದರು.
ತಮ್ಮ ಆತ್ಮಹತ್ಯೆ ಯತ್ನಕ್ಕೆ ಹಲವಾರು ಬಾರಿ ಜೈಲು ಶಿಕ್ಷೆಗೊಳಗಾಗಿರುವ ಶರ್ಮಿಳಾ, ತನ್ನ ಉಪವಾಸ ಸತ್ಯಾಗ್ರಹದ 5,757ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದರು.
ಆದರೆ ಈಗ ಶರ್ಮಿಳಾ ತನ್ನ ಉಪವಾಸ ಸತ್ಯಾಗ್ರಹವನ್ನು ತ್ಯಜಿಸಿ ಸಾರ್ವಜನಿಕ ಸೇವೆಯ ಬದಲು ತನ್ನ ಖಾಸಗಿ ಬದುಕಿಗೆ ಹೆಚ್ಚು ಒತ್ತು ನೀಡಿದ್ದು ಹಲವು ಸಾಮಾಜಿಕ ಕಾರ್ಯಕರ್ತರಿಗೆ ಸರಿ ಕಂಡಿಲ್ಲ.







