ಆ. 13, 14ರಂದು ಮುಲ್ಕಿಯಲ್ಲಿ ತುಳು ಸಮ್ಮೇಳನ
ಮಂಗಳೂರು, ಆ.10: ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ 4ನೆ ವರ್ಷದ ಸವಿನೆನಪಿಗಾಗಿ ಮುಲ್ಕಿಯಲ್ಲಿ ಆ.13 ಮತ್ತು 14ರಂದು ತುಲುವ ಐಸಿರದ ಐಸ್ರ ಎಂಬ ತುಳು ಸಮ್ಮೇಳನವನ್ನು ಆಯೋಜಿಸಲಾಗಿದೆ. ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಮುಂಬೈಯ ಸಾಹಿತಿ ಡಾ. ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಮುಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಳುವೆರೆ ದಿಬ್ಬಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ವೈ.ಎನ್. ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಸಮ್ಮೇಳನವನ್ನು ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ವಿವಿಧ ಸ್ಟಾಲ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಛಾಯಾಚಿತ್ರ ಪ್ರದರ್ಶನ, ವೆಬ್‌ಸೈಟನ್ನು ಈ ಸಂದರ್ಭ ಗಣ್ಯರು ಅನಾವರಣಗೊಳಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ಪಾರಿ ಪಾಡ್ದನ, ಸಂಧಿಬೀರ, ಸೆಬಿಸವಾಲ್ ನಡೆಯಲಿದೆ. ಮಧ್ಯಾಹ್ನ 1:45ಕ್ಕೆ ಡಿಜಿಟಲ್ ಮೀಡಿಯಾದಲ್ಲಿ ತುಳು ವಿಕಿಪಿಡಿಯ ಎಂಬ ವಿಷಯದಲ್ಲಿ ‘ಅರುಪತ್ತಿ ತುಳು ಬಾಸೆ’ ಗೋಷ್ಠಿ ನಡೆಯಲಿದ್ದು, ಅಪರಾಹ್ನ 3:30ಕ್ಕೆ ಮುಂಬೈಡ್ ತುಳು ಬಾಸೆದ ಬುಲೆಚ್ಚಿಲ್‌ಗೋಷ್ಠಿ ನಡೆಯಲಿದೆ. ಸಂಜೆ 5 ಗಂಟೆಗೆ ಅಜೆತತ್ತಿ ತುಳು ಬದ್‌ಕ್ ಗೋಷ್ಠಿ ಹಾಗೂ ಸಂಜೆ 6 ಗಂಟೆಗೆ ಹಿರಿಯ ಸಿನೆಮಾ ನಿರ್ಮಾಪಕ, ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ತುಳು ಸಿನೆಮಾ ಪ್ರಶಸ್ತಿ ವಿತರಣೆಯೂ ನಡೆಯಲಿದೆ.
ಆ. 14ರಂದು 10 ಗಂಟೆಗೆ ವಿಶೇಷ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 40 ಮಂದಿ ಸಾಧಕರಿಗೆ ಸನ್ಮಾನ ನಡೆಯಲಿದೆ. 3ನೆ ಗೋಷ್ಠಿಯಾಗಿ ಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಎಂಬ ವಿಷಯದಲ್ಲಿ ಚರ್ಚೆ ನಡೆಯಲಿದೆ. 4ನೆ ಗೋಷ್ಠಿಯಾಗಿ ತುಳು ಆರಾಧನೆ ಮತತು ಆಚರಣೆ ಎಂಬ ವಿಷಯದಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ವಿವರ ನೀಡಿದರು. ಗೋಷ್ಠಿಯ ಎರಡೂ ದಿನಗಳಲ್ಲಿ ಸಂಜೆಯ ಬಳಿಕ ವಿವಿಧ ತುಳು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ತುಳು ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಮಿತಿ ಸಂಚಾಲಕ ವಾಮನ ಇಡ್ಯಾ, ಸಹ ಕೋಶಾಧಿಕಾರಿ ಬಬಿತ ಯು. ಶೆಟ್ಟಿ, ಪ್ರಚಾರ ಉಪ ಸಮಿತಿ ಅಧ್ಯಕ್ಷ ನರೇಂದ್ರ ಕೆರೆಕಾಡು ಉಪಸ್ಥಿತರಿದ್ದರು.







