ಮನಪಾ ಬಗ್ಗೆ ಬಿಜೆಪಿಯ ಆರೋಪ ಸತ್ಯಕ್ಕೆ ದೂರವಾದ ವಿಚಾರ: ಮಹಾಬಲ ಮಾರ್ಲ

ಮಂಗಳೂರು, ಆ.10:ಮಹಾನಗರ ಪಾಲಿಕೆ ಆಡಳಿತ ವಿರುದ್ಧ ಧರಣಿ ನಿರತ ಬಿಜೆಪಿ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅವರ ಸುಳ್ಳು ಆರೋಪಗಳು ಸತ್ಯಕ್ಕೆ ದೂರವಾದ ವಿಚಾರ ಎಂದು ಮನಪಾ ಮಾಜಿ ಮೇಯರ್ ಮಹಾಬಲ ಮಾರ್ಲ ಹೇಳಿದ್ದಾರೆ.
ಅವರು ದ.ಕಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ನಾಯಕರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಮೋನಪ್ಪ ಭಂಡಾರಿಯವರು ನೀಡಿರುವ ಹೇಳಿಕೆಗಳನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದರು.
ಕುಡ್ಸೆಂಪ್ ಯೋಜನೆ ಜಾರಿ ತಂದಾಗ ಬಿಜೆಪಿ ಆಡಳಿತದಲ್ಲಿತ್ತು. ಆಗ ಹಾಲಿ ಶಾಸಕ ಲೋಬೋ ಅವರು ಮನಪಾ ಆಯುಕ್ತರಾಗಿದ್ದರು. ಅಂದು ಬಿಜೆಪಿಯವರೇ ಅವರನ್ನು ಒಳ್ಳೆಯ ಅಧಿಕಾರಿ ಎಂದು ಶ್ಲಾಸಿದ್ದರು. ಆಗ ಯೋಜನೆಯಲ್ಲಿ ಅವ್ಯವಹಾರ, ಸಮಸ್ಯೆಗಳಿವೆ ಎಂದು ಉಲ್ಲೇಖಿಸದ ಬಿಜೆಪಿಯವರು ಈಗ ಕೇವಲ ರಾಜಕೀಯ ಕಾರಣಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಅಧಿಕಾರಿಯಾಗಿದ್ದಾಗ ನಗರದ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಮನಗಂಡೇ ಮಂಗಳೂರಿನ ಜನತೆ 23 ವರ್ಷಗಳ ಬಳಿಕ ಲೋಬೊರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
3 ವರ್ಷಗಳ ಅವಧಿಯಲ್ಲಿ ಸ್ಥಳೀಯ ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆ, ಮಲೆನಾಡು ಪ್ರದೇಶಾಭಿವೃದ್ಧಿ, ಸಣ್ಣ ನೀರಾವರಿ ಇಲಾಖೆ, ಮಳೆ ಹಾನಿ ಪರಿಹಾರ, ಮೀನುಗಾರಿಕೆ ಇಲಾಖೆ ಸಹಿತ ಇತರೆ ಇಲಾಖೆಗಳಿಂದ 120 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಹೊಸ ಯೋಜನೆಗಳ ಅಳವಡಿಕೆಗೆ ಸಚಿವರು ಸಹಿತ ಜನತೆಯ ಅಭಿಪ್ರಾಯ ಸಂಗ್ರಹಿಸಿಕೊಂಡೇ ಆಡಳಿತ ನಡೆಸುತ್ತಿದ್ದಾರೆ ಎಂದರು.
ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ಅವರು ಮಾತನಾಡಿ ಕುಡ್ಸೆಂಪ್ ಹಸ್ತಾಂತರ ಬಿಜೆಪಿ ಆಡಳಿತದಲ್ಲಾಗಿತ್ತು. ಆಗ ಲೋಬೊ ಅವರು ಅಧಿಕಾರಿಯಾಗಿದ್ದರು. ಆ ಸಂದರ್ಭ ವೌನವಾಗಿದ್ದ ಬಿಜೆಪಿಗರು ಈಗೇಕೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ.ವಿನಯರಾಜ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಕಾಂಗ್ರೆಸ್ ಮುಖಂಡರುಗಳಾದ ವಿಶ್ವಾಸಕುಮಾರ್ ದಾಸ್, ರಮಾನಾಥ ಪೂಜಾರಿ, ಅಪ್ಪಿ , ಡೆನ್ನಿಸ್ ಡಿಸಿಲ್ವಾ, ಕೃತಿನ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







