ಮುಸ್ಲಿಮರ ವಿರುದ್ಧದ ಅಸಹಿಷ್ಣುತೆಗೆ ಟ್ರಂಪ್ ಕಾರಣ: ಹುತಾತ್ಮ ಮುಸ್ಲಿಮ್ ಸೈನಿಕನ ಹೆತ್ತವರ ಆರೋಪ

ವಾಶಿಂಗ್ಟನ್, ಆ. 10: ಅಮೆರಿಕದಲ್ಲಿ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ಅಸಹಿಷ್ಣುತೆಗೆ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕಾರಣ ಎಂಬುದಾಗಿ ಅಮೆರಿಕದ ಹುತಾತ್ಮ ಮುಸ್ಲಿಮ್ ಸೈನಿಕನ ಹೆತ್ತವರು ಆರೋಪಿಸಿದ್ದಾರೆ.
‘‘ಈ ಮಾತನ್ನು ಹೇಳುವ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ, ಸುಮಾರು ನಾಲ್ಕು ದಶಕಗಳ ಹಿಂದೆ ತಾವು ಅಮೆರಿಕಕ್ಕೆ ವಲಸೆ ಬಂದಾಗ ಅನುಭವಿಸಿದ್ದ ಸ್ವಾಗತ ಈ ವರ್ಷದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮಸುಕಾಗುತ್ತಿದೆ’’ ಎಂದು ‘ಗೋಲ್ಡ್ ಸ್ಟಾರ್’ ಹೆತ್ತವರಾದ ಖಿಝರ್ ಮತ್ತು ಘಜಾಲಾ ಖಾನ್ ಹೇಳಿದರು.
‘‘ಶಿರವಸ್ತ್ರಗಳನ್ನು ಧರಿಸಿದ ಜನರನ್ನು ಕಂಡರೆ ಜನರು ಅವರತ್ತ ಕೈತೋರಿಸುತ್ತಾರೆ, ಅವರನ್ನು ವಿಮಾನಗಳಿಂದ ಹೊರದಬ್ಬುತ್ತಾರೆ ಹಾಗೂ ಅವರು ಸಮೀಪದಿಂದ ಹಾದು ಹೋದರೆ ಅವರಿಗೆ ಕೆಟ್ಟದಾಗಿ ಬಯ್ಯುತ್ತಾರೆ’’ ಎಂದು 66 ವರ್ಷದ ಖಿಝರ್ ಖಾನ್ ‘ಯುಎಸ್‌ಎ ಟುಡೆ’ಗೆ ಹೇಳಿದ್ದಾರೆ.
‘‘ಈ ರೀತಿಯ ಅವಿವೇಕತನಕ್ಕೆ ಹೆಚ್ಚಿನ ಅಮೆರಿಕನ್ನರು ವಿರುದ್ಧವಾಗಿದ್ದಾರೆ. ಆದರೆ ಈಗಾಗಲೇ ಕ್ಷೀಣವಾಗಿ ಕಂಡುಬರುತ್ತಿದ್ದ ಈ ಪ್ರವೃತ್ತಿ ಈ ರಾಜಕೀಯ ಆಟಾಟೋಪದ ಮಾತುಗಳಿಂದ ಶಕ್ತಿ ಪಡೆದುಕೊಂಡಿದೆ. ವಿಶೇಷವಾಗಿ ಈ ಚುನಾವಣೆಯಲ್ಲಿ ಅದು ಇನ್ನಷ್ಟು ಹದಗೆಟ್ಟಿದೆ’’ ಎಂದಿದ್ದಾರೆ.







