ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮಾಜಿ ಶಾಸಕ
ಶಾಸಕನಾದರೂ ಸಾಹುಕಾರನಾಗಿಲ್ಲ ಬಾಕಿಲ ಹುಕ್ರಪ್ಪ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕನಾಗಿ ಮೆರೆದು ಬಹಳಷ್ಟು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದು ಬಡಜನತೆಯ, ಕ್ಷೇತ್ರದ ಮತದಾರರ ಪ್ರೀತಿಗೆ ಪಾತ್ರರಾಗಿದ್ದ ಬಾಕಿಲ ಹುಕ್ರಪ್ಪಇಂದು ಕೂಡಾ ಇತರರ ತೋಟದಲ್ಲಿ ರಬ್ಬರ್ ಟ್ಯಾಪಿಂಗ್, ಅಡಿಕೆ ಕೃಷಿ ಕೂಲಿ ಕೆಲಸ ಮಾಡಿಕೊಂಡು ದಿನದೂಡುತ್ತಿರುವ ಹೃದಯ ವಿದ್ರಾವಕ ಸನ್ನಿವೇಶ ಕಣ್ಣಿಗೆ ಕಟ್ಟುತ್ತಿದೆ.
1983ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಿಂತು ಕಾಂಗ್ರೆಸ್ ಅಭ್ಯರ್ಥಿಯನ್ನು ಹತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದ ಬಾಕಿಲ ಹುಕ್ರಪ್ಪ, ಅಂದು ದ.ಕ. ಜಿಲ್ಲೆಯ ಸುಳ್ಯದ ಶಾಸಕರಾಗಿ ಆಯ್ಕೆಯಾಗಿದ್ದರು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸರಕಾರ 19 ತಿಂಗಳ ಕಾಲಾವಧಿಯಲ್ಲಿ ಪತನಗೊಂಡು ರಾಜ್ಯದಲ್ಲಿ ಮರುಚುನಾವಣೆ ಘೋಷಣೆಯಾಯಿತು.
ಈ 19 ತಿಂಗಳಲ್ಲಿ ಸುಳ್ಯ ಕ್ಷೇತ್ರದಲ್ಲಿ 2 ಪಿಯು ಕಾಲೇಜು, 5 ಪ್ರೌಢಶಾಲೆಗಳು, 4 ಹಾಸ್ಟೆಲ್‌ಗಳು, 6 ದೊಡ್ಡ ಸೇತುವೆಗಳು, 3 ದೊಡ್ಡ ರಸ್ತೆಗಳಿಗೆ ಡಾಮರೀಕರಣದಂತಹ ಬೃಹತ್ ಯೋಜನೆಗಳನ್ನು ಕಾರ್ಯಗತಗೊಳಿಸಿ ಅಲ್ಪಾವಧಿಯಲ್ಲೇ ಕರ್ನಾಟಕ ಗುರುತಿಸಿದ ಕ್ರಿಯಾಶೀಲ ಶಾಸಕರಾದವರು ಪರಿಶಿಷ್ಟ ಪಂಗಡದ ಬಾಕಿಲ ಹುಕ್ರಪ್ಪ ಅವರು. ತನ್ನ ಶಾಸಕಾವಧಿಯಲ್ಲಿ ಕರ್ನಾಟಕ ಸರಕಾರದ ಪರವಾಗಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ ಗೇಮ್ಸ್ಗೆ ಕೂಡಾ ಹೋಗಿದ್ದರು ಹುಕ್ರಪ್ಪ.
1985ರ ಚುನಾವಣೆಯಲ್ಲಿ ಬಿಜೆಪಿ ತೊರೆದು ಜನತಾ ಪಕ್ಷದಲ್ಲಿ ಚುನಾವಣೆಗೆ ನಿಂತರು. ಇದರಿಂದ ಗರಂ ಆದ ಬಿಜೆಪಿ ಅಂದಿನ ದಿನದಲ್ಲಿ ಹುಕ್ರಪ್ಪ ಮತ್ತೆ ಶಾಸಕರಾಗಬಾರದೆಂದು ಕಾಂಗ್ರೆಸ್ ಜೊತೆ ಒಳಮೈತ್ರಿ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲರನ್ನು ಆರಿಸಿ ಸೇಡು ತೀರಿಸಿತ್ತು. ಬಾಕಿಲ ಹುಕ್ರಪ್ಪ ಕೇವಲ 800 ಮತಗಳ ಅಂತರದಿಂದ ಪರಾಭವಗೊಂಡರು. ಬಳಿಕ 1990ರಲ್ಲಿ ಜನತಾದಳದಿಂದ ಸ್ಪರ್ಧಿಸಿ 3ನೆ ಸ್ಥಾನಕ್ಕಿಳಿದರು. 1994ರಲ್ಲಿ ಬಂಗಾರಪ್ಪನವರ ಕೆಸಿಪಿ ಯಿಂದ ಸ್ಪರ್ಧಿಸಿ 2,500 ಮತಗಳನ್ನು ಪಡೆದರು. ನಂತರದ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲೇ ಅತ್ತಿಂದಿತ್ತ ಸುತ್ತಾಡಿದರು. ಇತ್ತೀಚೆಗೆ ಬಿಜೆಪಿಯನ್ನು ಬಿಟ್ಟು ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಾಕಿಲ ಹುಕ್ರಪ್ಪ ಕೇವಲ ಶಾಸಕನಾದದ್ದು ಮಾತ್ರವಲ್ಲ. ಆ ನಂತರ ಗುತ್ತಿಗಾರು ಗ್ರಾ.ಪಂ. ಚುನಾವಣೆಗೆ ನಿಂತು ಅದರ ಸದಸ್ಯರಾಗಿ, ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಶಾಸಕನಾದ ಬಳಿಕವೂ ಕೂಲಿ ಕೆಲಸ ಮಾಡಿಕೊಂಡು ಸಂಸಾರದ ಹೊಟ್ಟೆ ತುಂಬಿಸುತ್ತಿದ್ದ ಬಾಕಿಲ ಹುಕ್ರಪ್ಪ ಅವರಿಗೆ ತಿಂಗಳಿಗೆ ಅಲ್ಪ ಮೊತ್ತದ ಶಾಸಕ ಪಿಂಚಣಿ ಬರುತ್ತಿದೆ. ಶಾಸಕನಾದ ಬಳಿಕ 40 ರೂ. ದಿನಗೂಲಿಗೆ ದುಡಿಯುತ್ತಿದ್ದ ಹುಕ್ರಪ್ಪ 1990 ರ ಚುನಾವಣೆಯಲ್ಲಿ ಆಸ್ತಿ ಘೋಷಣೆ ಮಾಡುವಾಗ ಅವರಲ್ಲಿದ್ದದ್ದು 250 ರೂ. ಬ್ಯಾಂಕ್ ಬ್ಯಾಲೆನ್ಸ್, 4,000 ರೂ. ಬೆಲೆಬಾಳುವ ಹೆಂಡತಿಯ ಚಿನ್ನದ ಕಿವಿಯೋಲೆ ಮತ್ತು ಸಣ್ಣದಾದ ಕೃಷಿ ಭೂಮಿ ಅಷ್ಟೆ. ಇದು ಮಾಜಿ ಶಾಸಕನ ಒಟ್ಟು ಸೊತ್ತು.
ಶಾಸಕನಾಗಿ 22 ವರ್ಷಗಳಲ್ಲಿ ತನ್ನ ಹೆಂಡತಿಯ ತಂದೆಯ ಮನೆಯಲ್ಲೇ ಅರ್ಥಾತ್ ಮಾವನ ಮನೆಯಳಿಯನಾಗಿ ವಾಸಿಸುತ್ತಿದ್ದ ಹುಕ್ರಪ್ಪ ಇತ್ತೀಚೆಗೆ ಸ್ವ ಶ್ರಮದಾನದಿಂದ ಸಣ್ಣದಾದ ಸ್ವಂತ ಗುಡಿಸಲನ್ನು ನಿರ್ಮಿಸಿದ್ದಾರೆ. ಹಿಂದೊಮ್ಮೆ ಅಸೌಖ್ಯದಿಂದ ಸುಳ್ಯದ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗುವ ಸಂದರ್ಭ ಬಿಲ್ ಕಟ್ಟಲು ಹಣ ಇಲ್ಲದೆ ಪರದಾಡಿದಾಗ ಊರವರು ಸೇರಿ ಆಸ್ಪತ್ರೆ ಹಣ ಹೊಂದಿಸಿ ಬಿಡುಗಡೆಗೊಳಿಸಿದ್ದರು.
ಬಾಕಿಲ ಹುಕ್ರಪ್ಪಶಾಸಕನಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅದು ಬಿಟ್ಟು ಅವರಿಗೆ ರಾಜಕೀಯ ಮಾಡಲು ಗೊತ್ತಿಲ್ಲ. ಅವರು ಕೂಡಾ ಇತರರಂತೆ ರಾಜಕಾರಣಿ ಆಗಿದ್ದಿದ್ದರೆ ಬಹುಷಃ ಇಂದು ಮಂತ್ರಿ ಪದವಿಯಲ್ಲಿ ರಾರಾಜಿಸುತ್ತಿದ್ದರೋ ಏನೋ. ಅಂತೂ ಕೋಟ್ಯಾಧಿಪತಿಯ ಸಾಲಲ್ಲಿ ಇರುತ್ತಿದ್ದರು. ರಾಜಕೀಯದಲ್ಲಿ ಸತ್ಯ, ಧರ್ಮ, ಆದರ್ಶ ನಡೆಯುವುದಿಲ್ಲ ಎಂಬುವುದಕ್ಕೆ ಇಂದಿಗೂ ಕೂಲಿ ಕೆಲಸಕ್ಕೆ ಇತರರ ಮನೆ ಅಲೆಯುತ್ತಿರುವ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ಉತ್ತಮ ನಿದರ್ಶನ.







