ಸೌದಿ ವಿಶ್ವದಲ್ಲೇ ಅತ್ಯಂತ ಉದಾರ ದಾನಿ
ಬಿಲಿಯಗಟ್ಟಲೆ ರಿಯಾಲ್ ಮಾನವೀಯ ನೆರವು

ರಿಯಾದ್, ಆ. 10: ಸೌದಿ ಅರೇಬಿಯ ದಾನಿ ದೇಶಗಳ ಪೈಕಿ ಅತಿ ಉದಾರ ದಾನಿಯಾಗಿ ಹೊರಹೊಮ್ಮಿದೆ. ಅದು ಈವರೆಗೆ ಅಗತ್ಯವಿರುವ ದೇಶಗಳಿಗೆ ಮಾನವೀಯ ನೆರವಾಗಿ 224 ಬಿಲಿಯ ಸೌದಿ ರಿಯಾಲ್ (3,98,275 ಕೋಟಿ ರೂಪಾಯಿ) ಮೊತ್ತವನ್ನು ನೀಡಿದೆ.
ಸೌದಿ ಅರೇಬಿಯವು ದಾನ ನೀಡುವಾಗ ದೇಶಗಳ ನಡುವೆ ಧರ್ಮ, ಜನಾಂಗ ಅಥವಾ ರಾಜಕೀಯ ಸಿದ್ಧಾಂತಗಳ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ. ಇದು ಸೌದಿಯ ವಿದೇಶ ನೀತಿಯ ಮಹತ್ವದ ಅಂಶವಾಗಿದೆ.
ಈ ವಿಷಯವನ್ನು ಮದೀನಾದ ಇಸ್ಲಾಮಿಕ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ವ್ಯವಹಾರಗಳ ಡೀನ್ ಆಗಿರುವ ಸುಲೈಮಾನ್ ಬಿನ್ ಅಬ್ದುಲ್ಲಾ ಅಲ್-ರೌಮಿ ಮಂಗಳವಾರ ಘೋಷಿಸಿದ್ದಾರೆ.
ದೇಶವು ಯಾವುದೇ ಶರತ್ತುಗಳಿಲ್ಲದೆ 83 ದೇಶಗಳಿಗೆ ನೆರವು ನೀಡಿದೆ ಎಂದು ಅವರು ತಿಳಿಸಿದರು.
ಅದೂ ಅಲ್ಲದೆ, ಬಡ ಆಫ್ರಿಕ ದೇಶಗಳಿಗೆ ಸುಲಭ ಸಾಲ ಸೌಲಭ್ಯವನ್ನು ನೀಡುವಲ್ಲಿಯೂ ರಿಯಾದ್ ಮುಂಚೂಣಿಯಲ್ಲಿದೆ. ಇಂಥ ಸಾಲವಾಗಿ ಈವರೆಗೆ ಅದು 2,200 ಕೋಟಿ ಸೌದಿ ರಿಯಾಲ್‌ಗಳನ್ನು ನೀಡಿದೆ.
ಆಫ್ರಿಕ ಖಂಡಾದ್ಯಂತ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಹಣಕಾಸು ನೆರವು ನೀಡುವ ದೇಶಗಳ ಪೈಕಿ ಸೌದಿ ಅರೇಬಿಯ ಅತಿ ಹೆಚ್ಚಿನ ನೆರವು ನೀಡುವ ದೇಶವಾಗಿದೆ ಎಂದು ಸೌದಿ ಫಂಡ್ ಫಾರ್ ಡೆವಲಪ್‌ಮೆಂಟ್ ಮಂಗಳವಾರ ಬಿಡುಗಡೆ ಮಾಡಿದ ವರದಿಯೊಂದು ಹೇಳಿದೆ.
ಹಲವಾರು ಇಸ್ಲಾಮೇತರ ದೇಶಗಳು ಸೌದಿ ಅರೇಬಿಯದ ನೆರವನ್ನು ಪಡೆದಿವೆ ಎಂದು ಹೇಳಿದ ರೌಮಿ, ಕಿಂಗ್ ಸಲ್ಮಾನ್ ಪರಿಹಾರ ಮತ್ತು ಮಾನವೀಯ ನೆರವು ನಿಧಿಯ ಯಶಸ್ಸನ್ನು ಆ ದೇಶಗಳ ನಾಯಕರು ಶ್ಲಾಘಿಸುತ್ತಿದ್ದಾರೆ ಎಂದರು.
Courtesy : Arab News







