ಬ್ಯಾರಿ ಭಾಷಾ ಕಲಿಕಾ ತರಬೇತಿ ಸಮಾರೋಪ

ಮಂಗಳೂರು, ಆ.10: ನಗರ ಪೊಲೀಸ್ ಇಲಾಖೆಯ ವತಿಯಿಂದ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಪೊಲೀಸರಿಗೆ ಆಯೋಜಿಸಲಾಗಿದ್ದ ಬ್ಯಾರಿ ಭಾಷಾ ಕಲಿಕಾ ತರಬೇತಿ ಕಾರ್ಯಕ್ರಮವು ಇಂದು ಕಮಿಷನರ್ ಕಚೇರಿಯಲ್ಲಿ ಸಮಾರೋಪಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್, ಕಲಿಕಾ ತರಬೇತಿಯಲ್ಲಿ ಬ್ಯಾರಿ ಭಾಷೆಯ ಮೂಲಭೂತ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲಾಗಿದ್ದು, ಅದನ್ನು ಅಭಿವೃದ್ಧಿಪಡಿಸಿಕೊಂಡು ವೃತ್ತಿಜೀವನದಲ್ಲಿ ಬಳಸಿಕೊಳ್ಳಬೇಕೆಂದು ಪೊಲೀಸರಿಗೆ ಕಿವಿ ಮಾತು ಹೇಳಿದರು.
ನಾನು ನನ್ನ ಶಾಲಾ ಹಾಗೂ ಕಾಲೇಜು ವಿದ್ಯಾಭ್ಯಾಸಗಳು ಚೆನ್ನೈ ಹಾಗೂ ಪಶ್ಚಿಮ ಬಂಗಾಲದಲ್ಲಿ ಮಾಡಿದ್ದರೂ ಕರ್ನಾಟಕಕ್ಕೆ ಬಂದು ಕನ್ನಡ ಭಾಷೆ ಕಲಿತುಕೊಂಡಿದ್ದು, ಈ ಭಾಷೆಯು ನನ್ನ ವೃತ್ತಿ ಜೀವನದಲ್ಲಿ ಬಹಳ ನೆರವಾಗಿದೆ ಎಂದರು.
ಅತಿಥಿಗಳಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು, ಅಸಿಸ್ಟೆಂಟ್ ಪ್ರೊಫೆಸರ್ ಡಾ.ಯತೀಶ್ ಕುಮಾರ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿಸಿಪಿ ಶಾಂತರಾಜು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಪಿ ಡಾ.ಸಂಜೀವ್ ಪಾಟೀಲ್ ವಂದಿಸಿದರು. ಲಾವಣಿ ಮತ್ತು ಜಯಂತಿ ಅವರು ಪ್ರಾರಂಭದಲ್ಲಿ ಪ್ರಾರ್ಥನೆ ನೆರವೇರಿಸಿದರು.
13 ದಿನಗಳ ಈ ಬ್ಯಾರಿ ಭಾಷಾ ತರಬೇತಿ ಶಿಬಿರದಲ್ಲಿ 31ಮಂದಿ ಪೊಲೀಸರು ಪಾಲ್ಗೊಂಡಿದ್ದರು. ತರಬೇತಿ ಪಡೆದವರಲ್ಲಿ ಸಿಎಸ್‌ಬಿ ಪೊಲೀಸ್ ನಿರೀಕ್ಷಕ ಗುರುದತ್ ಕಾಮತ್, ಸಂಚಾರ ಉತ್ತರ ಪೊಲೀಸ್ ಠಾಣಾ ಸಿಬ್ಬಂದಿ ರಾಮಕೃಷ್ಣ, ಪಾಂಡೇಶ್ವರ ಠಾಣಾ ಮಹಿಳಾ ಪೊಲೀಸ್ ಸಿಬ್ಬಂದಿ, ವಿಜಯಗೀತಾ, ಮೂಡಬಿದ್ರೆ ಠಾಣಾ ಸಿಬ್ಬಂದಿ ಕಾಂತಪ್ಪ, ಸುರತ್ಕಲ್ ಠಾಣಾ ಸಿಬ್ಬಂದಿ ಕೃಷ್ಣಪ್ಪ ಅವರು ಬ್ಯಾರಿ ಭಾಷೆಯಲ್ಲೇ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪೊಲೀಸರಿಗೆ ಬ್ಯಾರಿ ಭಾಷೆ ತರಬೇತಿ ನೀಡಿದ ಅತಿಥಿ ಉಪನ್ಯಾಸಕರಾದ ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು, ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ, ಮಂಗಳೂರು ನ್ಯಾಷನಲ್ ಟ್ಯುಟೋರಿಯಲ್‌ನ ಪ್ರಾಂಶುಪಾಲ ಖಾಲಿದ್ ಉಜಿರೆ, ಮಂಗಳೂರು ಕೆರಿಯರ್ ಗೈಡ್‌ನ ನಿರ್ದೇಶಕ ಉಮರ್ ಯು.ಎಚ್. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







