ಬಿಪಿಎಲ್ ಪಡಿತರ ಚೀಟಿ ಮಾನದಂಡ ಸರಳೀಕರಣಕ್ಕೆ ಸಚಿವ ಸಂಪುಟ ಸಭೆ ಆಸ್ತು
‘ಉಜ್ವಲ ಯೋಜನೆ’ಯಡಿ ಬಡವರಿಗೆ ಅಡುಗೆ ಅನಿಲ

ಬೆಂಗಳೂರು, ಆ. 10: ಬಿಪಿಎಲ್ ಪಡಿತರ ಚೀಟಿ ಪಡೆಯಲು ಈ ಹಿಂದೆ ಇದ್ದ ಹದಿನಾಲ್ಕು ಮಾನದಂಡಗಳನ್ನು ಮಾರ್ಪಡಿಸಿದ್ದು, ಕೇವಲ ನಾಲ್ಕು ಮಾನದಂಡಗಳನ್ನು ನಿಗದಿಪಡಿಸಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇದರಿಂದ ಬಡವರು ಪಡಿತರ ಚೀಟಿ ಪಡೆಯುವುದು ಇನ್ನು ಸುಲಭವಾಗಲಿದೆ.
ಬುಧವಾರ ವಿಧಾನಸೌಧದ ಸಂಪುಟ ಸಭಾ ಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಆದಾಯ ತೆರಿಗೆ ವ್ಯಾಪ್ತಿಗೆ ಬಾರದವರು, 3 ಹೆಕ್ಟೇರ್ ಗಿಂತ ಹೆಚ್ಚು ಒಣ ಅಥವಾ ನೀರಾವರಿ ಭೂಮಿ ಇರುವವರು, 1ವಾಣಿಜ್ಯ ವಾಹನ ಅಥವಾ ನಾಲ್ಕು ಚಕ್ರದ ವಾಹನ ಹೊಂದಿರುವವರು, 150 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆದಾರರು ಹಾಗೂ ಹಳ್ಳಿಗಳಲ್ಲಿ 12 ಚದರ ಅಡಿ, ನಗರ ಪ್ರದೇಶದಲ್ಲಿ 10 ಚದರಡಿ ಮನೆ ಹೊಂದಿರುವವರು ಪಡಿತರ ಚೀಟಿಗೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಿದರು.
ಉಳಿದ ಎಲ್ಲರೂ ಬಡತನ ರೇಖೆಗಿಂತ ಕೆಳಗೆ ಬರಲಿದ್ದು, ಅವರೆಲ್ಲ ಪಡಿತರ ಚೀಟಿ ಪಡೆಯಲು ಅರ್ಹರಿದ್ದು, ಅವರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗುವುದು ಎಂದ ಅವರು, ಈ ಹಿಂದೆ ಇದ್ದ 14 ಮಾನದಂಡಗಳಲ್ಲಿಂದ ಗೊಂದಲ ಸೃಷ್ಟಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಸರಳೀಕರಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಜ್ವಲ ಯೋಜನೆ
ಪಡಿತರ ಸೀಮೆಎಣ್ಣೆ ಬದಲಿಗೆ ಕೇಂದ್ರ ಸರಕಾರದ ಪ್ರೋತ್ಸಾಹ ಧನದಲ್ಲೆ ಬಿಪಿಎಲ್ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ‘ಉಜ್ವಲ ಯೋಜನೆ’ಯಡಿ ಅಡುಗೆ ಅನಿಲದ ಸಿಲಿಂಡರ್ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಒಂದು ಸಿಲಿಂಡರ್‌ಗೆ ಠೇವಣಿ ಮೊತ್ತದ 1,450 ರೂ.ಗಳಾಗಲಿದ್ದು, ರಾಜ್ಯ ಸರಕಾರ 1 ಸಾವಿರ ರೂ. ಭರಿಸಲಿದ್ದು, ಫಲಾನುಭವಿ 450 ರೂ.ಗಳನ್ನು ಪಾವತಿಸಬೇಕು ಎಂದ ಅವರು, ಕೂಪನ್ ವ್ಯವಸ್ಥೆ ಜಾರಿಗೆ ತಂದ ಬಳಿಕ ಸೀಮೆಎಣ್ಣೆ ಬಳಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಡುಗೆ ಅನಿಲ ಬಳಕೆ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.







