ಯುಎಇ ಕಾರ್ಮಿಕ ಶಿಬಿರದಲ್ಲಿ ಭಾರತೀಯ ಕಾರ್ಮಿಕರ ಯಾತನೆ

ಅಬುಧಾಬಿ, ಆ. 10: ಯುಎಇಯ ಅಬುಧಾಬಿಯ ಮುಸ್ಸಾಫಾದಲ್ಲಿರುವ ಕಾರ್ಮಿಕ ಶಿಬಿರವೊಂದರಲ್ಲಿ ಹಲವು ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ.
ಲೆಜಂಡ್ ಪ್ರಾಜೆಕ್ಟ್ ಕಾಂಟ್ರಾಕ್ಟಿಂಗ್ ಎಲ್‌ಎಲ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ 25 ಕಾರ್ಮಿಕರಿಗೆ (ಅವರಲ್ಲಿ ಹೆಚ್ಚಿನವರು ಭಾರತೀಯರು) 10 ತಿಂಗಳಿಗೂ ಹೆಚ್ಚಿನ ಅವಧಿಯಿಂದ ಸಂಬಳ ನೀಡಲಾಗಿಲ್ಲ. ಈಗ ಅವರು ಬದುಕುಳಿಯುವುದಕ್ಕಾಗಿ ಪರದಾಡುತ್ತಿದ್ದಾರೆ.
ಅವರ ಗುತ್ತಿಗೆ ಸಂಸ್ಥೆಯು ಲೆಜಂಡ್ ಪ್ರಾಜೆಕ್ಟ್ ಗ್ರೂಪ್‌ನ ಭಾಗವಾಗಿದೆ. ಅದನ್ನು ನಡೆಸುತ್ತಿರುವುದು ಸಿರಿಯದ ಅಬ್ದುಲ್ ಮಾತಿನ್ ಅಲಾಲಿ ಎಂಬ ವ್ಯಕ್ತಿ. ಕಾರ್ಮಿಕರ ಪ್ರಕಾರ, ಮಾರ್ಚ್ ತಿಂಗಳ ಬಳಿಕ ಕಂಪೆನಿಯು ಯಾವುದೇ ಹೊಸ ಗುತ್ತಿಗೆಯನ್ನು ಪಡೆದುಕೊಂಡಿಲ್ಲ. ಕಾರ್ಮಿಕರ ಪಾಸ್‌ಪೋರ್ಟ್‌ಗಳನ್ನೂ ಮರಳಿಸುತ್ತಿಲ್ಲ.
ಹೆಚ್ಚಿನ ಕಾರ್ಮಿಕರ ವೀಸಾ ಅವಧಿ ಮುಗಿದಿದೆ ಹಾಗೂ ವೀಸಾ ನವೀಕರಿಸದ ಕಾರಣಕ್ಕಾಗಿ ಪಾಸ್‌ಪೋರ್ಟ್‌ಗಳು ಸಿಕ್ಕಿದ ಮೇಲೆ ತಮಗೆ ದೊಡ್ಡ ಮೊತ್ತದ ದಂಡ ವಿಧಿಸಲ್ಪಡುವ ಸಾಧ್ಯತೆ ಬಗ್ಗೆ ಕಾರ್ಮಿಕರು ಚಿಂತಿತರಾಗಿದ್ದಾರೆ.
ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಹರಿ ಶಂಕರ್ ಸಿಂಗ್ ಎಂಬ ಕಾರ್ಮಿಕರೊಬ್ಬರು ಕಳೆದ ತಿಂಗಳು ಹೃದಯಾಘಾತದಿಂದ ಮೃತಪಟ್ಟರು. ಅವರ ಶವವನ್ನು ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆಗೂ ಕಂಪೆನಿ ಹಣ ಕೊಡಲಿಲ್ಲ, ಅವರ ಬಾಕಿ ವೇತನವನ್ನೂ ವಿಲೇವಾರಿ ಮಾಡಲಿಲ್ಲ.
ಕಳೆದ ಕೆಲವು ತಿಂಗಳಲ್ಲಿ ಈ ಕಾರ್ಮಿಕರಿಗೆ ಕೆಲಸವಿಲ್ಲ. ಆದಾಗ್ಯೂ, ತಮ್ಮ ಮುಸ್ಸಾಫಾ 43 ಶಿಬಿರವನ್ನು ತೊರೆಯದಂತೆ ಕಂಪೆನಿಯಿಂದ ಆದೇಶ ಬಂದಿದೆ ಎಂದು ಕಾರ್ಮಿಕ್ರು ಹೇಳುತ್ತಾರೆ.
ಈ ಕಾರ್ಮಿಕರು ಸ್ವದೇಶಕ್ಕೆ ಹಿಂದಿರುಗುವುದನ್ನು ಎದುರು ನೋಡುತ್ತಿದ್ದಾರೆ ಹಾಗು ಈ ನಿಟ್ಟಿನಲ್ಲಿ ವಿದೆಶ ಸಚಿವೆ ಸುಶ್ಮಾ ಸ್ವರಾಜ್‌ರಿಂದ ನೆರವು ಯಾಚಿಸುತ್ತಿದ್ದಾರೆ.
Courtesy: Khaleej Times







