ಆರೋಪಿಗಳ ಪರ ವಕಾಲತ್ತು: ವಕೀಲರಿಂದ ಅಸ್ಪಷ್ಟ ಹೇಳಿಕೆ
ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ

ಉಡುಪಿ, ಆ.10: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಗಳಾದ ಪತ್ನಿ ಹಾಗೂ ಮಗನ ಪರವಾಗಿ ವಕಲಾತ್ತು ವಹಿಸುವ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿಯ ನ್ಯಾಯವಾದಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಈ ಪ್ರಕರಣದಲ್ಲಿ ಈವರೆಗೆ ನನ್ನನ್ನು ಯಾರು ಕೂಡ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿಚಾರವಾಗಿ ಕರೆಯಲಾದ ಸುದ್ದಿ ಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು. ಆರಂಭ ದಲ್ಲಿ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ನಂತರವೂ ಸ್ಪಷ್ಟವಾದ ಉತ್ತರ ನೀಡದೆ ಗೊಂದಲ ಸೃಷ್ಠಿಸಿದರು.
ಆರೋಪಿಗಳ ಪರ ನ್ಯಾಯಾಲಯದಲ್ಲಿ ವಾದಿಸುವ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ, ಇದಕ್ಕೆ ನಾವು ಸಾಮಾಜಿಕ ಜಾಲತಾಣದಲ್ಲೇ ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಇನ್ನು ಇಲ್ಲಿ ಏನು ಹೇಳುವ ವಿಚಾರ ಇಲ್ಲ ಎಂದು ತಿಳಿಸಿದರು.
ಮತ್ತೆ ಪ್ರಶ್ನೆ ಮುಂದುವರೆಸಿದ ಪತ್ರಕರ್ತರು, ತಾವು ಈ ಪ್ರಕರಣದಲ್ಲಿ ಆರೋಪಿಗಳ ಪರ ವಾದ ಮಾಡುತ್ತಿರೋ ಇಲ್ಲವೋ ಎಂಬುದಕ್ಕೆ, ಭಾಸ್ಕರ್ ಶೆಟ್ಟಿ ಕುಟುಂಬದವರು ಹಲವು ವರ್ಷಗಳಿಂದ ನನ್ನ ಕಕ್ಷಿದಾರರಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ನನ್ನನು ಯಾರು ಕೂಡ ಸಂಪರ್ಕಿಸಿಲ್ಲ. ಮುಂದೆ ಪತ್ನಿ ಹಾಗೂ ಮಗನ ಜಾಮೀನಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಾಗ ಯಾರು ಅವರ ಪರ ವಕೀಲರು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು.
ವಕೀಲರಿಗೆ ವೃತ್ತಿ ಧರ್ಮ ಎಂಬುದು ಇದೆ. ನಾವು ಆರೋಪಿಗಳನ್ನು ಬೆಂಬಲಿಸುವುದಲ್ಲ, ಅಮಾಯಕರಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ ವಾಗಿದೆ. ನಮಗೆ ಧರ್ಮ, ಜಾತಿ, ಲಿಂಗ ಬೇಧವಿಲ್ಲ. ಸ್ವಜಾತಿ ಎಂಬ ಕಾರಣಕ್ಕೆ ನಾವು ವಾದ ಮಾಡಲ್ಲ ಎಂದು ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಕರ್ತ ರೊಂದಿಗೆ ಮಾತನಾಡುತ್ತ ಹೇಳಿದರು.
ಕೊಲೆಗೆ 4 ದಿನ ಮುಂಚೆ ಬಂದಿದ್ದರು!
ಭಾಸ್ಕರ್ ಶೆಟ್ಟಿ ಕೊಲೆಯಾದ ಜು.28ಕ್ಕೆ ನಾಲ್ಕು ದಿನಗಳ ಮುಂಚೆ ಎರಡು ಬಾರಿ ನನ್ನನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ ನಾನು ಬ್ಯುಸಿಯಾಗಿ ದ್ದ ಕಾರಣ ಅವರಿಗೆ ಸಿಗಲು ಆಗಿಲ್ಲ ಎಂದು ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.
ಮೊದಲ ಬಾರಿಗೆ ನನ್ನನ್ನು ಸಂಪರ್ಕಿಸಲು ಬಂದಾಗ ನಾನು ಮುಂಬೈಯ ಕಕ್ಷಿದಾರರೊಂದಿಗೆ ಹಾಗೂ ಎರಡನೆ ಬಾರಿ ಬಂದಾಗ ಪಕ್ಷದ ಕಾರ್ಯಕರ್ತ ರೊಂದಿಗೆ ಸಭೆ ನಡೆಸಿಕೊಂಡಿದ್ದೆ. ಅದರ ನಂತರ ಅವರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಮುಂದೆ ಅವರು ಬೇರೆ ವಕೀಲರನ್ನು ಸಂಪರ್ಕಿಸಿರಬಹುದು ಎಂದು ಅವರು ಹೇಳಿದರು.
ಪತ್ನಿಗೆ ವಿಚ್ಛೇದನ ಹಾಗೂ ತನ್ನ ಆಸ್ತಿಯನ್ನು ತಾಯಿ ಹಾಗೂ ಅವರ ಕುಟುಂಬಸ್ಥರ ಹೆಸರಿಗೆ ವಿಲ್ ಮಾಡುವ ವಿಚಾರದ ಕುರಿತು ಮಾತುಕತೆ ಮಾಡಲು ಭಾಸ್ಕರ್ ಶೆಟ್ಟಿ, ವಕೀಲ ಮಟ್ಟಾರು ರತ್ನಾಕರ್ ಹೆಗ್ಡೆಯವರನ್ನು ಹುಡುಕಿಕೊಂಡಿ ಬಂದಿರಬಹುದು ಎಂದು ತಿಳಿದುಬಂದಿದೆ.







