ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದ ಕಾರ್ಪೊರೇಟರ್

ಶಿವಮೊಗ್ಗ, ಆ. 10: ಇತ್ತೀಚೆಗೆ ತುಂಗಾ ನಾಲೆಯ ಏರಿ ಒಡೆದು ಜಲಾವೃತಕ್ಕೀಡಾಗಿದ್ದ ಹಳೇ ಮಂಡ್ಲಿಯ ಬಡ ಸಂತ್ರಸ್ತರಿಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆ ಶಾಯಿಸ್ತಾ ನೂಮಾನ್ ಹಾಗೂ ಅವರ ಪತಿ ನೂಮಾನ್‌ರವರು ತಮ್ಮ ವೈಯಕ್ತಿಕ ಹಣದಲ್ಲಿ ‘ಆಹಾರದ ಕಿಟ್’ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಡುಬಡತನದ ಸ್ಥಿತಿಯಲ್ಲಿರುವ ಸುಮಾರು 70 ಕುಟುಂಬಗಳನ್ನು ಗುರುತಿಸಿ ಶಾಯಿಸ್ತಾ ನೂಮಾನ್ ದಂಪತಿ ಆಹಾರದ ಕಿಟ್ ವಿತರಣೆ ಮಾಡಿದರು. ಕಾರ್ಪೊರೇಟರ್ ಅವರ ಈ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ವಾರ್ಡ್ ವ್ಯಾಪ್ತಿಗೆ ಸೇರುವ ಹಳೇ ಮಂಡ್ಲಿ ಪ್ರದೇಶದಲ್ಲಿ ಬಹುತೇಕರು ಕಡುಬಡವರಾಗಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆಯಾಗಿತ್ತು. ಹಲವು ಮನೆಗಳು ಉರುಳಿ ಬಿದ್ದಿದ್ದವು. ಈ ಹಂತದಲ್ಲಿ ಪಾಲಿಕೆ ವತಿಯಿಂದ ದೊರಕಿಸಿ ಕೊಡಬಹುದಾದ ನೆರವನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದರು. ಇಂದಿಗೂ ಹಲವು ಕಡುಬಡವರು ಸಹಜ ಸ್ಥಿತಿಯಲ್ಲಿ ಜೀವನ ನಡೆಸಲು ಆಗದಂತಹ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಹಣ ಬಳಕೆ ಮಾಡಿ ಬಡ ಸಂತ್ರಸ್ತರಿಗೆ ಆಹಾರದ ಕಿಟ್‌ಗಳನ್ನು ವಿತರಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಈ ಸಂತ್ರಸ್ತರ ಪರವಾಗಿ ಕೆಲಸ ಮಾಡುತ್ತೇನೆ. ಅವರಿಗೆ ಸರಕಾರದಿಂದ ಸಿಗಬಹುದಾದ ಎಲ್ಲ ಸೌಲಭ್ಯ ತಲುಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಕಾರ್ಪೊರೇಟರ್ ಶಾಯಿಸ್ತಾ ನೂಮಾನ್‌ತಿಳಿಸಿದ್ದಾರೆ. ಆಹಾರದ ಕಿಟ್‌ನಲ್ಲಿ 10 ಕೆ.ಜಿ. ಅಕ್ಕಿ, ತಲಾ 1 ಕೆ.ಜಿ. ಬೇಳೆ, ಸಕ್ಕರೆ, ಮೈದಾ ಹಿಟ್ಟು, ಅರ್ಧ ಕೆಜಿ ಟೀ ಪುಡಿ, 1 ಲೀ. ಅಡುಗೆ ಎಣ್ಣೆ, 2 ಸೋಪು ಸೇರಿದಂತೆ ದಿನಬಳಕೆಯ ಸಾಮಗ್ರಿಗಳಿವೆ ಎಂದು ಶಾಯಿಸ್ತಾ ಅವರ ಪತಿ ನೂಮಾನ್‌ರವರು ತಿಳಿಸಿದ್ದಾರೆ. ಆಹಾರ ಕಿಟ್ ವಿತರಣೆ ಮಾಡುವ ವೇಳೆ ಅಮ್ಜದ್, ಜಾವೀದ್, ಚಾಂದು, ಸಂಜೀದ್, ತೌಸೀಫ್, ಫರ್ವೀಝ್ ಮತ್ತಿತರರಿದ್ದರು.





