ವಿದ್ಯಾರ್ಥಿಗಳುಇಚ್ಛಾಶಕ್ತಿ, ಕ್ರಿಯಾಶಕ್ತಿಯನ್ನು ಗಳಿಸಿಕೊಳ್ಳಬೇಕಾಗಿದೆ : ಪ್ರೊ.ಸಿ.ಎಂ.ತ್ಯಾಗರಾಜ್
ಎನ್ನೆಸ್ಸೆಸ್ ಚಟುವಟಿಕೆಗಳ ಉದ್ಘಾಟನೆ
ತರೀಕೆರೆ, ಆ.10: ಅಂಕಪಟ್ಟಿಗಳು ಲಾಟರಿ ಟಿಕೆಟ್‌ಗಳಲ್ಲ. ನಿಮ್ಮ ಶ್ರಮದ ಪ್ರಾಮಾಣಿಕತೆಯ ಪ್ರಮಾಣಪತ್ರ, ನಕಲು ಮಾಡಿ ಹೆಚ್ಚು ಅಂಕಗಳಿಸಿ ಅಂಕಪಟ್ಟಿ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಜ್ಞ್ಞಾನಾರ್ಜನೆ ಇರುವುದಿಲ್ಲ. ಓದಲು ಬರುವುದಿಲ್ಲ, ಬರೆಯಲೂ ಬರುವುದಿಲ್ಲ ಇದರಿಂದ ಪ್ರಯೋಜನ ಇರುವುದಿಲ್ಲ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಸಿ.ಎಂ.ತ್ಯಾಗರಾಜ್ ಹೇಳಿದ್ದಾರೆ. ಪಟ್ಟಣದ ಎಸ್‌ಜೆಎಂ ಕಾಲೇಜಿನಲ್ಲಿ ಕ್ರೀಡಾ ಸಾಂಸ್ಕೃತಿಕ ಯೂತ್ ರೆಡ್‌ಕ್ರಾಸ್ ಹಾಗೂ ಎನ್ನೆಸ್ಸೆಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ಗಳಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಕೇವಲ 35 ಅಂಕ ತಲುಪುವುದು ಗುರಿಯಲ್ಲ 100ಕ್ಕೆ 100ಪ್ರಯತ್ನ ಮಾಡಬೇಕು ವಿದ್ಯಾರ್ಥಿ ಜೀವನದಲ್ಲಿ ಮೂಲತವಾಗಿ ಭಾಷಾ ಕೌಶಲ್ಯತೆ, ತಂತ್ರಜ್ಞಾನ ಕೌಶಲ್ಯತೆ, ಸ್ಪರ್ಧಾತ್ಮಕ ಸಾಮರ್ಥ್ಯತೆ, ನಿರಂತರ ಪ್ರಯತ್ನ ಮತ್ತು ನಾಯಕತ್ವ ಗುಣಗಳನ್ನು ರೂಢಿಸಿಕೊಂಡಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ವಿದ್ಯಾರ್ಥಿಗಳ ಗುರಿ ಕೇವಲ ಗುಮಾಸ್ತಗಿರಿಗಲ್ಲದೆ ಐಎಎಸ್, ಕೆಎಎಸ್, ಮತ್ತು ಬ್ಯಾಂಕ್ ಎಕ್ಸಾಮ್ ಗಳನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ದಕ್ಷಿಣ ಏಷ್ಯನ್ ಪಂದ್ಯಾವಳಿ 2016ರಲ್ಲಿ ಸ್ವರ್ಣ ಪದಕ ವಿಜೇತ ಭದ್ರಾವತಿಯ ಮುನೀರ್ ಬಾಷಾ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಅಥವಾ ಜೀವನದಲ್ಲಿ ಆಗುವ ಸೋಲು ಸೋಲಲ್ಲ. ಆದರೆ ಗುರಿಮುಟ್ಟಲು ಪ್ರಯತ್ನಿಸದಿರುವುದೇ ಸೋಲು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಿ.ಇ.ವಿಜಯಕುಮಾರ್, ಇಂದು ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ಯಶಸ್ವಿಯಾಗಿ ಉದ್ಘಾಟನೆಯಾಗಿದೆ. ಪಠ್ಯದ ಜೊತೆಗೆ ಪಠ್ಯೇತ್ತರ ಚಟುವಟಿಕೆಗಳ ಮೂಲಕ ಮನಸ್ಸು ಮತ್ತು ದೇಹವನ್ನು ಆರೋಗ್ಯದಿಂದ, ಉಲ್ಲಾಸಭರಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮಗಳು, ಕ್ರೀಡಾಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಇತರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ವರ್ಷಪೂರ್ತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳು ಶಿಸ್ತಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಲು ಸೂಚಿಸಿದರು.
ಕುಮಾರಿ ಸಿಂಧು.ಎಚ್.ವೈ. ಮತ್ತು ಸಂಗಡಿಗರು ನಾಡಗೀತೆ ಹಾಡಿದರು, ಕುಮಾರಿ ಮುಬೀನ ತಾಜ್ ಧರ್ಮಗ್ರಂಥಗಳ ಚುಟುಕುಗಳನ್ನು ಪಠಣ ಮಾಡಿದರು, ಪ್ರದೀಪ್.ಪಿ.ಒ ಮತ್ತು ಸಂಗಡಿಗರು ಎನ್ನೆಸ್ಸೆಸ್‌ಗೀತೆಯನ್ನು ಹಾಡಿದರು, ಶೈಲಜಾ ಮತ್ತು ಶಾಂತಕುಮಾರ್ ಜಾನಪದಗೀತೆ ಮತ್ತು ಭಾವಗೀತೆಹಾಡಿದರು, ಕುಮಾರಿ ಆಶಾರಾಣಿ ಸ್ವಾಗತಿಸಿ ನಾಗರಾಜ್.ಪಿ.ಆರ್. ವಂದಿಸಿದರು ಹಾಗೂ ನಿರ್ಮಲಾ.ಆರ್ ಮತ್ತು ಚೇತನ್.ಎಚ್.ಪಿ ಕಾರ್ಯಕ್ರಮ ನಿರೂಪಿಸಿದರು.
ಎನ್ನೆಸ್ಸೆಸ್ ಅಧಿಕಾರಿಗಳಾದ ಪ್ರೊ.ಬಿ.ಆರ್.ಡಮ್ಮಳ್ಳಿ, ಪ್ರೊ.ಎಂ.ಆರ್ ಚಿದಾನಂದಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಕೆ.ಆರ್.ವೀರೇಶ್ ಮತ್ತು ಕ್ರೀಡಾಸಮಿತಿ ಸಂಚಾಲಕಎ.ಸದಾಶಿವನಾಯ್ಕೊ ಉಪಸ್ಥಿತರಿದ್ದರು, ಕಾರ್ಯಕ್ರಮ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.







