ಶಿಕ್ಷಣ ಇಲಾಖೆಯಲ್ಲಿಯೇ ಮಹಿಳೆಯರಿಗೆ ಹೆಚ್ಚು ಕಿರುಕುಳ: ಮಂಜುಳಾ ಮಾನಸಾ
ಶಿವಮೊಗ್ಗದಲ್ಲಿ ಮಹಿಳಾ ರಕ್ಷಣೆಗೆ ಓಬವ್ವ ಪಡೆ ರಚನೆ
ಶಿವಮೊಗ್ಗ, ಆ. 10: ಇತರೆ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಶಿಕ್ಷಣ ಇಲಾಖೆಯಲ್ಲಿಯೇ ಮಹಿಳೆಯರಿಗೆ ಕಿರುಕುಳ ಹೆಚ್ಚಾಗಿದೆ ಎಂಬ ಆರೋಪವಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಮಾನಸಾ ತಿಳಿಸಿದ್ದಾರೆ. ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ‘ಮಹಿಳಾ ಆಯೋಗದ ಚಿತ್ತ ಜಿಲ್ಲಾಡಳಿತಗಳತ್ತ’ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ದೂರುಗಳ ಪರಿಶೀಲನೆಯ ವೇಳೆ ಅವರು ಮಾತನಾಡಿದರು. ಶಿಕ್ಷಣ ಇಲಾಖೆಯು ದೇವಾಲಯವಿದ್ದಂತೆ. ನಿಷ್ಕಂಳಕವಾಗಿರಬೇಕು. ಆದರೆ, ಅಲ್ಲಿಯೇ ಆರೋಪಗಳು, ಕಿರುಕುಳಗಳು ನಡೆದರೆ ಏನು ಮಾಡಬೇಕು. ಮಕ್ಕಳು ಹೇಗೆ ಪಾಠ ಕಲಿಯಬೇಕು. ಈ ವ್ಯವಸ್ಥೆ ಬದಲಾಗಬೇಕು. ಮಹಿಳೆಯರಿಗೆ ಆಗುವ ತೊಂದರೆ ತಪ್ಪಬೇಕು ಎಂದು ತಿಳಿಸಿದರು. ಇಲಾಖೆಯ ವತಿಯಿಂದ ಆಯೋಜಿಸುವ ಕಾರ್ಯಾಗಾರ, ಸಭೆ-ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ಕಿರುಕುಳ ತಡೆಯ ಬಗ್ಗೆ ಮಾಹಿತಿ ನೀಡಿ, ತಿಳಿ ಹೇಳುವ ಕೆಲಸ ಮಾಡಿ. ಈ ಮೂಲಕ ಮಹಿಳೆಯರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗೆ ಮಂಜುಳಾ ಮಾನಸರವರು ಸಲಹೆ ನೀಡಿದರು. ಇಲ್ಲಿಯೂ ಹೆಚ್ಚು:
ಕೆಎಸ್ಸಾರ್ಟಿಸಿ ಸಂಸ್ಥೆಯಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವ ದೂರುಗಳು ಕೇಳಿಬರುತ್ತಿವೆ. ಮಹಿಳಾ ಸಿಬ್ಬಂದಿಯನ್ನು ವಿನಾಕಾರಣ ಸತಾಯಿಸುವ ಕೆಲಸವನ್ನು ಕೆಲ ಅಧಿಕಾರಿಗಳು ಮಾಡುತ್ತಿದ್ದಾರೆ. ಪುರುಷರ ರೀತಿ ಸಮಾನತೆ ಕೇಳುತ್ತೀರಾ? ಅವರಂತೆ ಕೆಲಸ ಮಾಡಲು ಆಗುವುದಿಲ್ಲವೇಕೆ? ಎಂದು ಮಹಿಳಾ ಸಿಬ್ಬಂದಿ ಯನ್ನು ನಿಂದಿಸುವ ಕೆಲಸವನ್ನು ಕೆಲ ಅಧಿಕಾರಿಗಳು ಮಾಡು ತ್ತಿದ್ದಾರೆನ್ನಲಾಗಿದೆ. ಇದಕ್ಕೆ ಕಡಿವಾಣ ಬೀಳಬೇಕು ಎಂದರು. ಸಮರ್ಪಣಾ ಮನೋಭಾವವಿರಲಿ:
ಮಹಿಳೆಯರ ದೌರ್ಜನ್ಯ ತಡೆಗೆ ಪ್ರತಿಯೊಂದು ಇಲಾಖೆ, ಅಧಿಕಾರಿಗಳಲ್ಲಿ ಸಮರ್ಪಣಾ ಮನೋಭಾವವಿರಬೇಕು. ಆಗ ಮಾತ್ರ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆ ಸಾಧ್ಯ ವಾಗಲಿದೆ. ನಿರ್ಲಕ್ಷ್ಯ ಮನೋಭಾವ ಬೆಳೆಸಿಕೊಂಡರೆ ಯಾವುದೇ ಬದಲಾವಣೆ ಸಾಧ್ಯವಿಲ್ಲವಾಗಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ಮುಂದುವರಿಯಲಿದೆೆ ಎಂದು ಅಭಿಪ್ರಾಯಪಟ್ಟರು. ಸಮಿತಿ ರಚನೆ: ಜಿಪಂ ಸಿಇಒ ಕೆ.ರಾಕೇಶ್‌ಕುಮಾರ್‌ರವರು ಮಾತನಾಡಿ, ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗೆ ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗಿದೆ. ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಾಗ ತನಿಖಾ ಸಮಿತಿ ರಚನೆ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪರವರು ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಇಲಾಖೆಯಲ್ಲಿಯೂ ಮಹಿಳಾ ದೌರ್ಜನ್ಯ ತಡೆ ಸಮಿತಿ ರಚನೆ ಮಾಡಲಾಗಿದೆ. ಇಲಾಖೆಯ ಮುಖ್ಯಸ್ಥರಿಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ದೌರ್ಜನ್ಯದ ದೂರುಗಳನ್ನು ಆಲಿಸಿ, ತ್ವರಿತಗತಿಯಲ್ಲಿ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ತಡೆಗೆ ಇಲಾಖೆಯ ವತಿಯಿಂದ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ. ಮಹಿಳೆಯರಿಗೆ ತೊಂದರೆ ಕೊಡುವ ಕಿಡಿಗೇಡಿಗಳ ಪತ್ತೆಗೆ ಮಹಿಳಾ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಓಬವ್ವ ಪಡೆ ರಚನೆ ಮಾಡಲಾಗಿದೆ. ಇಲ್ಲಿಯವರೆಗೂ 155 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ 3,000 ರೂ. ಮಾಸಾಶನ
ಆ್ಯಸಿಡ್ ದಾಳಿಗೊಳಗಾದ ಮಹಿಳೆಯರು ಗೌರವಯುತ ಜೀವನ ನಡೆಸಬೇಕೆಂಬ ಉದ್ದೇಶದಿಂದ ಪ್ರತೀ ತಿಂಗಳು 3,000 ರೂ. ಮಾಸಾಶನ ನೀಡುವ ವ್ಯವಸ್ಥೆಯನ್ನು ರಾಜ್ಯ ಸರಕಾರ ಆರಂಭಿಸಿದೆ. ಹಾಗೆಯೇ ಈ ಹಿಂದೆ ನೀಡಲಾಗುತ್ತಿದ್ದ 3 ಲಕ್ಷ ರೂ. ಪರಿಹಾರ ಮೊತ್ತವನ್ನು 20 ಲಕ್ಷ ರೂ. ಗೆ ಏರಿಕೆ ಮಾಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸಾ ಮಾಹಿತಿ ನೀಡಿದ್ದಾರೆ. ಬಹುತೇಕ ಆ್ಯಸಿಡ್ ದಾಳಿಗೊಳಗಾದ ಮಹಿಳೆಯರು ಹೊರಗಡೆ ತೆರಳಿ ಕೆಲಸ ಮಾಡಲಾಗದಂತಹ ಪರಿಸ್ಥಿತಿಯಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಿಲ್ಲದೆ ಜೀವನ ನಡೆಸುವ ಸಲುವಾಗಿ ರಾಜ್ಯ ಮಹಿಳಾ ಆಯೋಗವು ಪರಿಹಾರ ಮೊತ್ತ ಹೆಚ್ಚಿಸುವ ಹಾಗೂ ಮಾಸಾಶನ ನೀಡಬೇಕೆಂಬ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸಲ್ಲಿಸಿತ್ತು. ಇದಕ್ಕೆ ಮುಖ್ಯಮಂತ್ರಿಗಳು ತ್ವರಿತಗತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.