ವಿಲೇವಾರಿಯಾಗದ ಅರ್ಜಿಗಳು: ಸಿಬ್ಬಂದಿಗೆ ಡಿಸಿ ತರಾಟೆ
ಚಿಕ್ಕಮಗಳೂರು,ಆ.10: ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರ ಕೆಲಸಗಳು ಆಗದೆ ಇದ್ದರೆ ಜನರು ಜಿಲ್ಲಾಧಿಕಾರಿ ಕಚೇರಿಯತ್ತ ಮುಖ ಮಾಡುತ್ತಾರೆ. ಇನ್ನೂ ಜಿಲ್ಲಾಧಿಕಾರಿ ಕಚೇರಿಯಲ್ಲೂ ಕೆಲಸವಾಗಲೂ ವರ್ಷಗಟ್ಟಲೆ ಸಮಯ ತೆಗೆದುಕೊಂಡರೆ ಜನರ ಪಾಡೇನಾಗಬೇಕು?ಹೀಗೆ ಜಡ್ಡುಗಟ್ಟಿದ್ದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಜಿಲ್ಲಾಧಿಕಾರಿ ಜಿ. ಸತ್ಯವತಿ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು.
ಜಿಲ್ಲಾಧಿಕಾರಿ ಕಚೇರಿಯ ಕಂದಾಯ ವಿಭಾಗಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಯವರು, ಕಡತಗಳನ್ನು ಪರಿಶೀಲಿಸಿದರು. ಹಲವು ತಿಂಗಳುಗಳಿಂದ ವಿವಿಧ ಇಲಾಖೆಗಳಿಗೆ ಸಂಬಂಧ ಪಟ್ಟ ಸಾರ್ವಜನಿಕ ಅರ್ಜಿಗಳು ವಿಲೇವಾರಿಯಾಗದೇ ಇರುವುದನ್ನು ಗಮನಿಸಿ ಹೆಚ್ಚುವರಿಯಾಗಿ ನಾಲ್ಕು ಸಿಬ್ಬಂದಿಯನ್ನು ಕಂದಾಯ ವಿಭಾಗಕ್ಕೆ ನಿಯೋಜಿಸುವಂತೆ ಅಪರ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ನಂತರ ಶಿರಸ್ತೇದಾರ್ ಕುರ್ಚಿಯತ್ತ ಸಾಗಿದ ಜಿಲ್ಲಾಧಿಕಾರಿ ಅಕ್ರಡೇಶನ್ ದಾಖಲೆ ಕೇಳಿದರು. ಅದಕ್ಕೆ ಶಿರಸ್ತೆದಾರ್ ತಡಬಡಾಯಿಸುತ್ತಿದ್ದಾಗ ತಾವೇ ಖುದ್ದಾಗಿ ಕಪಾಟಿನಲ್ಲಿದ್ದ ದಾಖಲೆಗಳನ್ನು ತೆಗೆದು ಎಲ್ಲ ದಾಖಲೆಗಳನ್ನು ಪರಿಶೀಲಿಸಿದರು. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸಲ್ಲಿಕೆಯಾಗಬೇಕಿದ್ದ ಅಕ್ರಿಡೇಶನ್ ದಾಖಲೆಯೂ ಆಗಸ್ಟ್ ತಿಂಗಳಾದರೂ ಸಲ್ಲಿಕೆಯಾಗದಿರುವುದಕ್ಕೆ ಆಕ್ರೋಶಗೊಂಡ ಜಿಲ್ಲಾಧಿಕಾರಿ ನೋಟಿಸ್ ನೀಡುವಂತೆ ಅಪಾರ ಜಿಲ್ಲಾಧಿಕಾರಿಗೆ ಆದೇಶಿಸಿದರು.
ಇನ್ನೂ ದ್ವಿತಿಯ ದರ್ಜೆ ಮಹಿಳಾ ಸಿಬ್ಬಂದಿಯೊಬ್ಬರು ಜೂ. 16ರಂದು ಕಡತ ಸ್ವೀಕರಿಸಿ ಇಷ್ಟು ದಿನಗಳಾದರೂ ಸಂಬಂಧ ಪಟ್ಟ ವಿಭಾಗಕ್ಕೆ ಕಡತ ವಿಲೇವಾರಿ ಮಾಡದೇ ಇರುವುದಕ್ಕೆ ಕಾರಣ ಕೇಳಿದಾಗ ಮಹಿಳಾ ಸಿಬ್ಬಂದಿ ಅದನ್ನು ರಿಜಿಸ್ಟರ್ ಪೋಸ್ಟ್ ಮಾಡಬೇಕು ಎಂದರು. ಪಕ್ಕದಲ್ಲೇ ಇರುವ ಕೊಠಡಿಗೆ ಅರ್ಜಿ ತಲುಪಿಸಲು ರಿಜಿಸ್ಟರ್ ಪೋಸ್ಟ್ ಮಾಡಬೇಕಾ?ಇಷ್ಟು ದಿನಗಳು ಬೇಕಾ ಪಕ್ಕದ ಕೊಠಡಿಗೆ ದಾಖಲೆ ಕಳುಹಿಸಲು ಎಂದು ತರಾಟೆಗೆ ತೆಗೆದುಕೊಂಡರು. ದೀಪದ ಕೆಳಗೆ ಕತ್ತಲು ಎನ್ನುವಂತೆ ಜಡ್ಡುಗಟ್ಟಿದ್ದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಜಿಲ್ಲಾಧಿಕಾರಿ ಚುರುಕು ಮುಟ್ಟಿಸಿದ್ದಾರೆ.







