ಮಡಿಕೇರಿ ತಹಶೀಲ್ದಾರ್ ಕಚೇರಿಯ ಅವ್ಯವಸೆ್ಥ
ದಾಖಲೆಗಾಗಿ ಗ್ರಾಮೀಣ ಜನರ ನಿತ್ಯ ಅಲೆದಾಟ

ಮಡಿಕೇರಿ, ಆ.10: ಮಡಿಕೇರಿ ತಹಶೀಲ್ದಾರ್ ಕಚೇರಿ ಸುಧಾರಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ವಿನಾಕಾರಣ ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರ ಖಡಕ್ ಎಚ್ಚರಿಕೆಗೆ ಕಿಂಚಿತ್ತೂ ಬೆಲೆ ಇಲ್ಲದಂತಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಜಾತಿ ದೃಢೀಕರಣ ಪತ್ರ ಮತ್ತು ಆದಾಯ ದೃಢೀಕರಣ ಪತ್ರಕ್ಕಾಗಿ ಕನಿಷ್ಠ ಎರಡು ತಿಂಗಳ ಕಾಲ ಅರ್ಜಿದಾರರು ಅಲೆಯಲೇಬೇಕಾಗಿದೆ. ಅರ್ಜಿದಾರರಿಗೆ ನಾಳೆ ಬನ್ನಿ, ನಾಡಿದ್ದು ಬನ್ನಿ, ಒಂದು ವಾರ ಬಿಟ್ಟು ಬನ್ನಿ ಎಂದು ತಿಂಗಳುಗಟ್ಟಲೆ ಅಲೆದಾಡಿಸುವ ಅಧಿಕಾರಿಗಳು ಅದೆಷ್ಟೋ ದಿನಗಳು ಕಳೆದ ನಂತರ ವಿನಾಕಾರಣ ಅರ್ಜಿಯಲ್ಲಿ ನ್ಯೂನತೆಗಳಿವೆ ಎಂದು ಕುಂಟು ನೆಪ ಹೇಳಿ ಮತ್ತಷ್ಟು ದಿನ ದೂಡುವ ಕೆಲಸ ಮಾಡುತ್ತಿದ್ದಾರೆ. ಸಕಾಲದ ಪ್ರಕಾರ 21-22 ದಿನಗಳೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆನ್ನುವ ನಿಯಮವಿದ್ದರೂ ಎರಡು ತಿಂಗಳಾದರೂ ಜಾತಿ ದೃಢೀಕರಣ ಪತ್ರ ಮತ್ತು ಆದಾಯ ದೃಢೀಕರಣ ಪತ್ರ ಸಿಗದೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ತಹಶೀಲ್ದಾರ್ ಕಚೇರಿ ಆವರಣದಲ್ಲಿ ಖಾಯಂ ಆಗಿ ಓಡಾಡುವ ದಲ್ಲಾಳಿಗಳಿಗೆ 500 ರೂ. ನೀಡಿದರೆ ಒಂದೆರೆಡು ದಿನಗಳಲ್ಲಿ ಯಾವುದೇ ಅಡಚಣೆಯಿಲ್ಲದೆ ಈ ಪತ್ರಗಳು ಸುಲಭವಾಗಿ ಸಿಗುತ್ತಿವೆ ಎನ್ನುವ ಆರೋಪ ಗ್ರಾಮೀಣ ಅರ್ಜಿದಾರರಿಂದ ಕೇಳಿ ಬಂದಿದೆ. ಗ್ರಾಮೀಣ ಜನರು ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಬೇಸತ್ತಿದ್ದು, ಕೂಲಿ ಕಾರ್ಮಿಕರು, ರೈತರು ಬಸ್ ಪ್ರಯಾಣ ದರವನ್ನು ಭರಿಸಿ ಕಂಗಾಲಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಪಡಿತರ ಚೀಟಿ ಇನ್ನಿತರ ಅಗತ್ಯತೆಗಳಿಗೆ ಜಾತಿ ದೃಢೀಕರಣ ಪತ್ರ ಮತ್ತು ಆದಾಯ ದೃಢೀಕರಣ ಪತ್ರಗಳು ಕಡ್ಡಾಯವಾಗಿದ್ದು, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳ ಈ ವರ್ತನೆಯಿಂದ ಜನರು ಇನ್ನಿಲ್ಲದ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಸೂಕ್ತ ಮಾಹಿತಿಗಳನ್ನು ನೀಡದ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ದಲ್ಲಾಳಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸುತ್ತಿದ್ದಾರೆ. ಉಸ್ತುವಾರಿ ಸಚಿವರ ಖಡಕ್ ಮಾತಿಗೆ ಅಂಜದ ಅಧಿಕಾರಿಗಳು:
ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಮಡಿಕೇರಿ ತಹಶೀಲ್ದಾರ್ ಕಚೇರಿಗೆ ಜು.2 ರಂದು ಭೆೇಟಿ ನೀಡಿ ಅಧಿಕಾರಿಗಳ ಬೆವರಿಳಿಸಿದ್ದರು. ಕಡತಗಳನ್ನು ಸಕಾಲದಲ್ಲಿ ವಿಲೆೇವಾರಿ ಮಾಡದೆ ಸಾರ್ವಜನಿಕರನ್ನು ಸತಾಯಿಸುತ್ತಿದ್ದ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ತಾಲೂಕು ಕಚೇರಿಗೆ ದಿಢೀರ್ ಭೆೇಟಿ ನೀಡಿದ ಅವರು, ಸಾರ್ವಜನಿಕರ ದೂರುಗಳನ್ನು ಆಲಿಸಿ ಭೂ ದಾಖಲೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಎರಡು ಮೂರು ವರ್ಷ ಕಳೆದರೂ ವಿಲೆೇವಾರಿ ಮಾಡದಿರುವ ಬಗ್ಗೆ ಆಕ್ಷೇಪಿಸಿ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದರು. ಅರ್ಜಿದಾರರನ್ನು ಹಾದಿ ತಪ್ಪಿಸುತ್ತಿದ್ದ ಶಿರಸ್ತೇದಾರ್ ಕೃಷ್ಣಮೂರ್ತಿ ಎಂಬವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ಅವರನ್ನು ತರಾಟೆೆಗೆ ತೆಗೆದುಕೊಂಡು ತಕ್ಷಣ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದ್ದರು.
ಉಸ್ತುವಾರಿ ಸಚಿವರ ಮೊ.ಸಂ ತಹಶೀಲ್ದಾರ್ ಕಚೇರಿಯಲ್ಲಿ ಹಾಕಿ:
ಕೂಲಿ ಕಾರ್ಮಿಕರು, ಬಡವರು, ರೈತರು, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರತಿದಿನ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವುದೇ ಜನಪ್ರತಿನಿಧಿಗಳು ಇವರ ಬೆಂಬಲಕ್ಕೆ ಬಾರದೆ ಇರುವುದರಿಂದ ಅಸಹಾಯಕ ಸ್ಥಿತಿಯಲ್ಲಿ ಅಗತ್ಯ ದಾಖಲೆಯನ್ನು ಪಡೆಯಲು ಕಾದು ಕಾದು ದಿನ ದೂಡುತ್ತಿದ್ದಾರೆ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ, ತಹಶೀಲ್ದಾರ್ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೊ.ಸಂ. ಅಳವಡಿಸಿ, ಅವರಿಗಾದರೂ ಕರೆ ಮಾಡಿ ಸಮಸ್ಯೆ ಬಗೆ ಹರಿಸಿಕೊಳ್ಳುತ್ತೇವೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







