ಮುಂಬೈಯಲ್ಲಿ ಉದ್ಯಮಿ ಅಪಹರಣ ಪ್ರಕರಣ: 5 ಕೋಟಿ ರೂ. ಮೌಲ್ಯದ ರೂಬಿ ವಶಕ್ಕೆ

ಮಂಗಳೂರು, ಆ. 10: ಮುಂಬೈ ನಗರದಲ್ಲಿ ಜುಲೈ ತಿಂಗಳಲ್ಲಿ ಉದ್ಯಮಿಯೊಬ್ಬರನ್ನು ಅಪಹರಿಸಿ 5 ಕೋಟಿ ರೂ. ಬೆಲೆಬಾಳುವ ರೂಬಿ, ಡೈಮಂಡ್ ಚಿನ್ನ ಅಳವಡಿಸಿದ ಸೊತ್ತನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನ ಸಹಿತ ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಿಕರ್ನಕಟ್ಟೆಯ ಮಂಜಾರ ಅಪಾರ್ಟ್‌ಮೆಂಟ್ ನಿವಾಸಿ ಕೆ.ಎಫ್.ಯೂನುಸ್ (42) ಎಂದು ಗುರುತಿಸಲಾಗಿದೆ.
ಇಂದು ಮಂಗಳೂರು ನಗರದ ಬಿಕರ್ನಕಟ್ಟೆ ಮರಿಯನ್ ಪಾರಡೈಸ್ ಎಂಬ ನಿರ್ಮಾಣ ಹಂತದ ಕಟ್ಟಡದ ಬಳಿಯಲ್ಲಿ ಆರೋಪಿ ತಲ್ಲತ್ ಹಾಗೂ ಇನ್ನೋರ್ವ ಮಾರುತಿ ಆಲ್ಟೋ ಕಾರಿನಲ್ಲಿ ಬೆಲೆಬಾಳುವ ರೂಬಿಯನ್ನು ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಾರುತಿ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ ಸಂದರ್ಭದಲ್ಲಿ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ್ದರು. ಕಾರಿನಲ್ಲಿದ್ದ ತಲ್ಲತ್ ಎಂಬಾತನು ಕಾರಿನಿಂದ ಓಡಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರೆ, ಕಾರಿನಲ್ಲಿದ್ದ ಯೂನುಸ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈತ ತಲ್ಲತ್ ಬಜಾಲ್, ಲಿಖಿತ್ ಗೋಪಾಲ ಶೆಟ್ಟಿ, ನಾಸಿರ್ ಅಹ್ಮದ್ ಖಾನ್ ಮುಂಬಯಿ, ಫಕೀರ್ ಮುಹಮ್ಮದ್ ಶಮೀರ್ ಶೇಖ್, ಗೌತಮ್ ಅನಂತ್ ಕದಂ, ಪ್ರತೀಕ್ ಅಲೋಕ್ ಮೊಯ್ತಿ, ಶಮೀರ್ ಹಸನ್ ಖಾನ್ ಇವರೊಂದಿಗೆ ಸೇರಿ ಮುಂಬೈಯ ಉದ್ಯಮಿಯೊಬ್ಬನನ್ನು ಅಪಹರಣ ಮಾಡಿ ಅವರ ವಶದಿಂದ ಕೋಟ್ಯಾಂತರ ಬೆಲೆಬಾಳುವ ರೂಬಿಯನ್ನು ದರೋಡೆ ಮಾಡಿದ್ದು, ಅದನ್ನು ಸೊತ್ತನ್ನು ಹಾಸನಕ್ಕೆ ಮಾರಾಟ ಮಾಡಲು ಕೊಂಡು ಹೋಗುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸರು ಮುಂಬೈ ಪೊಲೀಸರಲ್ಲಿ ವಿಚಾರ ವಿನಿಮಯ ಮಾಡಿಕೊಂಡಾಗ ಜುಲೈ ತಿಂಗಳಲ್ಲಿ ಈ ದರೋಡೆ ಪ್ರಕರಣ ನಡೆದ ಬಗ್ಗೆ ಮಾಹಿತಿ ದೊರೆಯಿತು. ಅಲ್ಲದೇ ಈ ಸಂಬಂಧ ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಶಪಡಿಸಿಕೊಳ್ಳಲಾದ ರೂಬಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 5 ಕೋಟಿ ಬೆಲೆ ಇದೆ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ರೂಬಿ, ಡೈಮಂಡ್, ಚಿನ್ನ ಅಳವಡಿಸಿದ ಸೊತ್ತು ಮಾರುತಿ ಅಲ್ಟೋ ಕಾರು, ಮೊಬೈಲ್ ಫೋನ್‌ನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿಸಿಬಿ ಘಟಕದ ಇನ್ಸಪೆಕ್ಟರ್ ಸುನೀಲ್ ವೈ. ನಾಯಕ್, ಪಿಎಸ್ಸೈ ಶ್ಯಾಮ್ ಸುಂರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







