ಇಂದಿನಿಂದ ಭಾರತದ ಬ್ಯಾಡ್ಮಿಂಟನ್ ಆಟಗಾರರ ಒಲಿಂಪಿಕ್ಸ್ ಅಭಿಯಾನ ಆರಂಭ
ಎಲ್ಲರ ಚಿತ್ತ ಸೈನಾ ನೆಹ್ವಾಲ್‌ರತ್ತ

ರಿಯೋ ಡಿ ಜನೈರೊ, ಆ.10: ನಾಲ್ಕು ವರ್ಷಗಳ ಹಿಂದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸೈನಾ ನೆಹ್ವಾಲ್ ಮತ್ತೊಮ್ಮೆ ಭಾರತೀಯರ ಭರವಸೆಯ ಭಾರ ಹೊತ್ತಿದ್ದಾರೆ. ಸೈನಾ ಹಾಗೂ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಸಹಿತ ಒಟ್ಟು ಆರು ಶಟ್ಲರ್‌ಗಳು ಗುರುವಾರ ರಿಯೋ ಒಲಿಂಪಿಕ್ಸ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಸೈನಾ ತನ್ನ 18ರ ಹರೆಯದಲ್ಲಿ ಒಲಿಂಪಿಕ್ಸ್ ಯಾನ ಆರಂಭಿಸಿದ್ದು, 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿಗೆ ತೃಪ್ತಿಪಟ್ಟಿದ್ದ ಸೈನಾ ಈ ಬಾರಿ ಚಿನ್ನದ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.
ಸೈನಾ ಜಿ ಗುಂಪಿನಲ್ಲಿ ತನ್ನ ಹೋರಾಟ ಆರಂಭಿಸಲಿದ್ದು, ಜಿ ಗುಂಪಿನಲ್ಲಿ ವಿಸ್ಸೆಂಟ್ ಹಾಗೂ ಮರಿಯಾ ಯುಲಿಟಿನಾ ಅವರಿದ್ದಾರೆ.
2014ರಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ತನ್ನ ತರಬೇತಿ ಕೇಂದ್ರವನ್ನು ಸ್ಥಳಾಂತರಿಸಿದ್ದ ಸೈನಾ ಭಾರತದ ಮಾಜಿ ಮುಖ್ಯ ಕೋಚ್ ವಿಮಲ್‌ಕುಮಾರ್ ಅವರ ಕೋಚಿಂಗ್‌ನಲ್ಲಿ ಪಳಗುತ್ತಿದ್ದಾರೆ.
ಸೈನಾ ಆಲ್ ಇಂಗ್ಲೆಂಡ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದಾರೆ. ಇಂಡಿಯಾ ಓಪನ್ ಹಾಗೂ ಚೀನಾ ಪ್ರೀಮಿಯರ್ ಸೂಪರ್ ಸರಣಿಯನ್ನು ಜಯಿಸಿದ್ದರು. ಕಳೆದ ವರ್ಷ ಮಂಡಿನೋವಿನಿಂದ ಸಮಸ್ಯೆ ಎದುರಿಸಿದ್ದ ಸೈನಾ ಮಲೇಷ್ಯಾ, ಸಿಂಗಾಪುರ ಹಾಗೂ ಇಂಡೋನೇಷ್ಯಾದಲ್ಲಿ ಸ್ಥಿರ ಪ್ರದರ್ಶನ ನೀಡುವುದರೊಂದಿಗೆ ಮೊದಲಿನ ಫಿಟ್‌ನೆಸ್ ಪಡೆದಿದ್ದರು.
ಸೈನಾ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಥಾಯ್ಲೆಂಡ್‌ನ ಪಾರ್ನ್‌ಟಿಪ್, ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಲೀ ಕ್ಸುರುಯಿ ಹಾಗೂ ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಸ್ಪೇನ್‌ನ ಕಾರೊಲಿನಾ ಮರಿನ್‌ರನ್ನು ಎದುರಿಸುವ ಸಾಧ್ಯತೆಯಿದೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ತನ್ನ ಚೊಚ್ಚಲ ಒಲಿಂಪಿಕ್ಸ್‌ನ್ನು ಸ್ಮರಣೀಯವಾಗಿಸಲು ಬಯಸಿದ್ದು, ಎಂ ಗುಂಪಿನಲ್ಲಿದ್ದಾರೆ. ಸಿಂಧು ಒಲಿಂಪಿಕ್ಸ್‌ಗೆ ಮೊದಲು ಪ್ರಶಸ್ತಿ ಜಯಿಸದೇ ಇದ್ದರೂ ಅಗ್ರ ಶಟ್ಲರ್‌ಗಳಾದ ಲೀ ಕ್ಸುರುಯಿ, ಯೀಹಾನ್ ವಾಂಗ್ ಹಾಗೂ ಕಾರೊಲಿನಾ ಮರಿನ್‌ರನ್ನು ಮಣಿಸಿ ದೈತ್ಯ ಸಂಹಾರಿ ಎನಿಸಿದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್ ಭರವಸೆಯ ಆಟಗಾರನಾಗಿದ್ದು, 2014ರ ಚೀನಾ ಓಪನ್ ಹಾಗೂ 2015ರ ಇಂಡಿಯಾ ಓಪನ್ ಪ್ರಶಸ್ತಿ ಜಯಿಸಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ, ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ರಿಯೋ ಗೇಮ್ಸ್‌ನಲ್ಲಿ ಮಿಂಚುವ ಭರವಸೆ ಮೂಡಿಸಿರುವ ಭಾರತದ ಇತರ ಶಟ್ಲರ್‌ಗಳು.







