ಬಾಕ್ಸರ್ ವಿಕಾಸ್ ಪ್ರಿ-ಕ್ವಾರ್ಟರ್‌ಫೈನಲ್‌ಗೆ

ರಿಯೋ ಡಿ ಜನೈರೊ, ಆ.10: ಮಾಜಿ ಏಷ್ಯನ್ ಗೇಮ್ಸ್ ಚಾಂಪಿಯನ್ ವಿಕಾಸ್ ಕ್ರಿಶನ್(75 ಕೆಜಿ) ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನಕ್ಕೆ ಶ್ರೇಷ್ಠ ಆರಂಭ ನೀಡಿದ್ದಾರೆ.
ಮಂಗಳವಾರ ನಡೆದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅಮೆರಿಕದ ಚಾರ್ಲ್ಸ್ ಕಾನ್ವೆಲ್‌ರನ್ನು 3-0 ಅಂತರದಿಂದ ಮಣಿಸಿದ 24ರ ಹರೆಯದ ವಿಕಾಸ್ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾದರು.
ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಆಡಿದ 18ರ ಹರೆಯದ ಅಮೆರಿಕದ ಬಾಕ್ಸರ್ ಕಾನ್ವೆಲ್ ಆರಂಭಿಕ ಸುತ್ತಿನಲ್ಲೇ ಭಾರತದ ವಿಕಾಸ್ ದಾಳಿಯನ್ನು ಎದುರಿಸಲು ಪರದಾಟ ನಡೆಸಿದರು.
ಮೊದಲ ಮೂರು ನಿಮಿಷಗಳಲ್ಲಿ ನೇರ ಹೊಡೆತ ಹಾಗೂ ಅಪರ್‌ಕಟ್‌ನ ಮೂಲಕ ಎದುರಾಳಿಯ ಬೆವಳಿಸಿದರು. ಎರಡನೆ ಸುತ್ತಿನಲ್ಲಿ ಆತ್ಮವಿಶ್ವಾಸದಿಂದ ಆಡಿದ ವಿಕಾಸ್ ಅಮೆರಿಕದ ಯುವ ಬಾಕ್ಸರ್‌ನ ಮೇಲೆ ಸವಾರಿ ಮುಂದುವರಿಸಿದರು. ಮೊದಲೆರಡು ಸುತ್ತಿನಲ್ಲಿ ಪ್ರತಿ ಹೋರಾಟ ನೀಡಲು ವಿಫಲವಾಗಿದ್ದ ಕಾನ್ವೆಲ್ 3ನೆ ಸುತ್ತಿನ ಅಂತಿಮ ಮೂರನೆ ನಿಮಿಷದಲ್ಲಿ ಕೆಲವೊಂದು ಪಂಚ್ ನೀಡಿದರೂ ಅದು ಗೆಲುವಿಗೆ ಸಾಕಾಗಲಿಲ್ಲ. ಅಂತಿಮ ಸುತ್ತು ಟೈನಲ್ಲಿ ಕೊನೆಗೊಂಡಿತು.
ಆದರೆ, ಮೊದಲೆರಡು ಸುತ್ತುಗಳಲ್ಲಿ ಜಯ ಸಾಧಿಸಿದ್ದ ವಿಕಾಸ್ ಜಯಶಾಲಿಯಾದರು. ಕಾಮನ್‌ವೆಲ್ತ್ ಗೇಮ್ಸ್ ಮಾಜಿ ಚಾಂಪಿಯನ್ ಮನೋಜ್‌ಕುಮಾರ್ ಬುಧವಾರ ತನ್ನ ಅಭಿಯಾನ ಆರಂಭಿಸಲಿದ್ದಾರೆ.







