ಹಂಗೇರಿಯದ ‘ಉಕ್ಕಿನ ಮಹಿಳೆ’ ಕಟಿಂಕಾರಿಗೆ ಮತ್ತೊಂದು ಚಿನ್ನ

ರಿಯೋ ಡಿ ಜನೈರೊ, ಆ.10: ಹಂಗೇರಿಯದ ‘‘ ಉಕ್ಕಿನ ಮಹಿಳೆ’’ ಖ್ಯಾತಿಯ ಈಜುಗಾರ್ತಿ ಕಟಿಂಕಾ ಹೊಸಿಝು ಮಹಿಳೆಯರ 200 ಮೀ. ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಕಟಿಂಕಾ ರಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕು ದಿನಗಳಲ್ಲಿ ಜಯಿಸಿರುವ ಮೂರನೆ ಚಿನ್ನದ ಪದಕ ಇದಾಗಿದೆ.
27ರ ಹರೆಯದ ಕಟಿಂಕಾ 2 ನಿಮಿಷ, 6.58 ಸೆಕೆಂಡ್‌ನಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆಯುವುದರೊಂದಿಗೆ ಚಿನ್ನದ ಪದಕ ಬಾಚಿಕೊಂಡರು. ಅವರು ಈಗಾಗಲೇ ಶನಿವಾರ ನಡೆದ 400 ಮೀ. ವೈಯಕ್ತಿಕ ಮಿಡ್ಲೆ ಹಾಗೂ ಸೋಮವಾರ ನಡೆದಿದ್ದ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಕಟಿಂಕಾ 200 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಗೆ ತಯಾರಿ ನಡೆಸುವ ಉದ್ದೇಶದಿಂದ ಮಂಗಳವಾರ ಬೆಳಗ್ಗೆ ನಡೆದ 200 ಮೀ. ಬಟರ್‌ಫ್ಲೈ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಕಟಿಂಕಾ ಇನ್ನೊಂದು ಚಿನ್ನದ ಪದಕ ಜಯಿಸಿದರೆ ಒಲಿಂಪಿಕ್ಸ್ ಗೇಮ್ಸ್‌ವೊಂದರಲ್ಲಿ ಜರ್ಮನಿಯ ಕ್ರಿಸ್ಟಿನ್ ಒಟ್ಟೊ 1988ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಕ್ರಿಸ್ಟಿನ್ ಒಟ್ಟೊ ಒಂದೇ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನದ ಪದಕ ಜಯಿಸಿದ್ದರು.
ಕಟಿಂಕಾ 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯ ವೇಗದಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದ್ದರು.







