ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಶಿಕ್ಷಿಸಿ
ಮಾನ್ಯರೆ,
ರಾಜಧಾನಿ ಬೆಂಗಳೂರಿನಲ್ಲಿ ಕೃತಕ ನೆರೆಗೆ ಕಾರಣವಾಗಿದ್ದ ರಾಜಕಾಲುವೆ ಒತ್ತುವರಿಯನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತಿದೆ. ಒಂದು ಸಣ್ಣ ಮಳೆಗೂ ಉದ್ಯಾನನಗರಿ ಹೆದರುವ ಸನ್ನಿವೇಶ ನಿರ್ಮಾಣವಾಗಿದ್ದು, ನಗರದ ಭವಿಷ್ಯದ ದೃಷ್ಟಿಯಿಂದ ಮುಂದಾಗುವ ಮತ್ತಷ್ಟು ಅನಾಹುತ ತಡೆಗೆ ಇದು ಜರೂರು ಆಗಬೇಕಿದ್ದ ಕ್ರಮ. ಯಾವುದೇ ಒತ್ತಡಕ್ಕೂ ಮಣಿಯದೆ, ಅಕ್ರಮ ಕಟ್ಟಡಗಳ ತೆರವು ಕಾರ್ಯ ಮುಂದುವರಿಯುತ್ತದೆ ಎಂದು ಸರಕಾರ ಘೋಷಣೆ ಮಾಡಿರುವುದು ಶ್ಲಾಘನೀಯ. ಆದರೆ ಇಲ್ಲಿ ಕೇವಲ ಕಟ್ಟಡ ಮಾಲಕರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಿ ದಂಡಿಸಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಭಾಗಿಯಾಗದೇ ಅಕ್ರಮವಾಗಿ ಕಟ್ಟಡ ತಲೆಎತ್ತಲು ಸಾಧ್ಯವಿಲ್ಲ ಎಂಬುದು ಸರ್ವವಿಧಿತ. ಖಾತೆ ನೀಡಿಕೆ, ಕಟ್ಟಡ ನಕ್ಷೆ ಮಂಜೂರಾತಿ, ಎನ್‌ಒಸಿ ಸೇರಿದಂತೆ ನಿರ್ಮಾಣ ಕಾರ್ಯದ ಪ್ರತೀ ಹಂತದಲ್ಲೂ ಅಧಿಕಾರಿಗಳ ಸಹಾಯ ಹಸ್ತವಿಲ್ಲದೆ ಇಷ್ಟೆಲ್ಲಾ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಹಣಕ್ಕಾಗಿ ಸರಕಾರಿ ಭೂಮಿ ಕಬಳಿಸುವುದು, ಅದಕ್ಕೆ ಸಹಕರಿಸುವುದು ಮತ್ತು ಜನಾಸಾಮಾನ್ಯ ಮಾಡುವ ಒತ್ತುವರಿ, ಎರಡೂ ಒಂದೇ ಅಲ್ಲ ಎಂಬುದನ್ನು ಆಳುವವರು ಮನಗಾಣಬೇಕು. ಆದರೆ ಕಾನೂನು ಬಲೆಯಲ್ಲಿ ಪ್ರತಿಸಲ ಸಿಕ್ಕಿಬೀಳುವವರು ಜನ ಸಾಮಾನ್ಯರು ಎನ್ನುವಂತಾಗಿದೆ. ಇದು ವ್ಯವಸ್ಥೆಯ ದೋಷ. ಪಾಲಿಕೆಯಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವೇ ಇದರ ಮೂಲ ಬೇರು ಎಂದರೆ ತಪ್ಪಾಗಲಾರದು, ತೆರವು ಕಾರ್ಯಾಚರಣೆಯೊಂದಿಗೆ, ಕೆರೆ, ಕಾಲುವೆ, ಗೋಮಾಳದಂತಹ ಸರಕಾರಿ ಭೂಮಿಯ ಒತ್ತುವರಿ ಮಾಡಿಕೊಳ್ಳಲು ಸಹಕರಿಸಿದಂತಹ ಅಧಿಕಾರಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ಹಣಕ್ಕಾಗಿ ಸರಕಾರಿ ಭೂಮಿಗಳನ್ನು ಕಬಳಿಸಿ, ಮಾರಿರುವ ಬಿಲ್ಡರ್‌ಗಳಿಗೆ ಶಿಕ್ಷೆಯ ಜೊತೆ ಅವರಿಂದ ದಂಡ ವಸೂಲಿ ಮಾಡಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು. ಅಲ್ಲದೆ ಇದರೊಂದಿಗೆ ನಗರದಲ್ಲಿ ಸರಕಾರಿ ಭೂಮಿಯನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ. ಕೆರೆಗಳ, ಕಾಲುವೆಗಳ ಹೂಳು ತೆಗೆಸಬೇಕು. ನಗರದ ಅಳಿದುಳಿದ ಕೆರೆ, ಸರಕಾರಿ ಭೂಮಿ, ಭೂಗಳ್ಳರ ಪಾಲಾಗದೆ, ಅದರ ಸಂರಕ್ಷಣೆಗೆ ದಿಟ್ಟ ಕ್ರಮ ಕೈಗೊಳ್ಳಬೇಕಿದೆ.





