ಶಿಕ್ಷಣ ಸಂಸ್ಥೆಯೊಳಗೆ ನುಗ್ಗಿ ದಬ್ಬಾಳಿಕೆ ಸರಿಯೇ?
ಮಾನ್ಯರೆ,
ಮಕ್ಕಳು ಚೆನ್ನಾಗಿ ಕಲಿಯಬೇಕು, ಅವರ ಭವಿಷ್ಯವು ಉಜ್ವಲವಾಗಿರಬೇಕೆಂದೇ ಹೆತ್ತವರು ತಮ್ಮ ಮಕ್ಕಳನ್ನು ಶಾಲಾಕಾಲೇಜುಗಳಿಗೆ ಕಳುಹಿಸುತ್ತಾರೆ. ಪ್ರತಿಯೊಬ್ಬ ಹೆತ್ತವರಿಗೂ ತಮ್ಮ ಮಕ್ಕಳಿಗೆ ನೀಡಬೇಕಾದ ಶಿಕ್ಷಣವನ್ನು ನಿರ್ಧರಿಸುವ ಹಕ್ಕಿದೆ. ನನ್ನ ಮಗ/ಮಗಳು ಇದನ್ನೇ ಕಲಿಯಬೇಕು. ಇಂತಹ ವಿಷಯಗಳಲ್ಲಿ ಪರಿಣತಿ ಹೊಂದಬೇಕೆಂದು ಬಯಸುತ್ತಾರೆ. ಹಾಗಾಗಿಯೇ ಖಾಸಗಿ ಶಾಲೆಗಳಲ್ಲಿರುವ ಪಾಠದ ಜೊತೆಗಿನ ವಿಶೇಷ ತರಬೇತಿಗಳು ಅಂದರೆ ಸ್ಕೇಟಿಂಗ್, ಡ್ರಾಯಿಂಗ್, ಮ್ಯೂಸಿಕ್, ಕರಾಟೆ ಮತ್ತು ವಿದೇಶಿ ಬಹು ಭಾಷಾ ಕಲಿಕೆಯೂ (ಅರಬಿಕ್, ಫ್ರೆಂಚ್, ಜಪಾನಿಸ್, ರಷ್ಯನ್, ಕೊರಿಯನ್, ಪೋರ್ಚುಗೀಸ್, ಸ್ಪಾನಿಷ್ ಇತ್ಯಾದಿ.) ಕಲಿಕೆಯ ಒಂದು ವಿಶೇಷ ಭಾಗವಾಗಿ ಗುರುತಿಸಲ್ಪಡುತ್ತದೆ. ಹೆತ್ತವರು ಇಂಗ್ಲಿಷ್ ಅಲ್ಲದೇ ಬೇರೆ ಭಾಷೆಗಳನ್ನೂ ಮಕ್ಕಳಿಗೆ ಕಲಿಸಲು ಇಚ್ಛಿಸುತ್ತಾರೆ. ಯಾಕೆಂದರೆ ಭವಿಷ್ಯದಲ್ಲಿ ಇಂಗ್ಲಿಷ್ ಅಲ್ಲದೆ ಬೇರೆ ಭಾಷೆಗಳನ್ನು ಕಲಿತರೆ ಅತೀ ಹೆಚ್ಚು ಆದ್ಯತೆಯುಳ್ಳ ಉನ್ನತ ಉದ್ಯೋಗಗಳು ಲಭಿಸಬಹುದೆಂಬ ಆಕಾಂಕ್ಷೆ ಅವರಿಗಿರುತ್ತದೆ. ಮಕ್ಕಳು ಕೂಡಾ ಇಂತಹ ವಿದೇಶಿ ಭಾಷೆಗಳ ಕಲಿಕೆಯಲ್ಲಿ ಆಸಕ್ತಿ ವಹಿಸುತ್ತಾರೆ. ಭಾರತ ಸರಕಾರವು ಪ್ರತೀವರ್ಷ ಅನುವಾದಕರನ್ನು, ಭಾಷಾಂತರಕಾರರನ್ನು ವಿದೇಶಗಳಿಂದ ಕರೆಸಿಕೊಳ್ಳುತ್ತಿರುವಾಗ ಹೇಗೆ ತಾನೇ ವಿದೇಶಿ ಭಾಷೆಯ ಕಲಿಕೆಯನ್ನು ಹೆತ್ತವರು ಪ್ರೋತ್ಸಾಹಿಸದಿರಲು ಸಾಧ್ಯ.
ಇಂತಹ ಹಲವಾರು ಮೌಲ್ಯಗಳಡಗಿರುವ ಸಾಹಿತ್ಯಕ ಭಾಷೆಯನ್ನು ಮಂಗಳೂರಿನ ಶಾಲೆಯೊಂದು ನೀಡುತ್ತಿರುವಾಗ ತಮ್ಮನ್ನು ಕೇಸರಿಪಡೆಯ ಕಾರ್ಯಕರ್ತರೆಂದು ಹೇಳಿಕೊಂಡ ಗುಂಪೊಂದು ಮಾಧ್ಯಮದವರೊಂದಿಗೆ ಶಾಲೆಯ ತರಗತಿಯ ಕೊಠಡಿಗಳಿಗೆ ನುಗ್ಗುವುದು ಎಷ್ಟು ಸರಿ? ಈಗಾಗಲೇ ಈ ರೀತಿ ಗುಂಪುದಾಳಿಗಳು, ದಲಿತರನ್ನು, ಮುಸ್ಲಿಮರನ್ನು ಸಾಕಷ್ಟು ಹಿಂಸಿಸಿ ಅಪಮಾನಿಸಿರು ವಾಗ, ಇನ್ನು ಮುಂದೆ ಶಾಲಾಕಾಲೇಜುಗಳಲ್ಲಿ ಕೂಡಾ ಗಲಭೆಯೆಬ್ಬಿಸಿ ಮಕ್ಕಳ ಶಿಕ್ಷಣಕ್ಕೆ ಮಾರಕವಾಗಲಾರದೆೆಂಬುದಕ್ಕೆ ಏನು ಗ್ಯಾರಂಟಿ? ಸರಕಾರವು ಇಂತಹ ಗುಂಪುಗಳಿಗೆ ಕೂಡಲೇ ಕಡಿವಾಣ ಹಾಕಬೇಕು.







