ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ 19 ವೈದ್ಯಕೀಯ ವಿದ್ಯಾರ್ಥಿಗಳ ಉಚ್ಚಾಟನೆ
ಮುಂಬೈ,ಆ.10: ಮುಂಬೈ ಮತ್ತು ಕೊಲ್ಲಾಪುರಗಳಲ್ಲಿಯ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಟಾದಡಿ ಪ್ರವೇಶ ಪಡೆಯಲು ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಕ್ಕಾಗಿ 19 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಅಧಿಕಾರಿಗಳು ಉಚ್ಚಾಟನೆಗೊಳಿಸಿದ್ದಾರೆ.
ಎಸ್‌ಸಿ/ಎಸ್‌ಟಿ ಕೋಟಾದಡಿ ಪ್ರವೇಶ ಪಡೆದಿರುವ ಎಲ್ಲ ವಿದ್ಯಾರ್ಥಿಗಳ ಜಾತಿ ಪ್ರಮಾಣಪತ್ರಗಳನ್ನು ದೃಢಪಡಿಸಿಕೊಳ್ಳುವಂತೆಯೂ ರಾಜ್ಯದಲ್ಲಿಯ ಎಲ್ಲ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶಗಳ ಮೇಲೆ ನಿಗಾಯಿರಿಸುವ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯವು ಸೂಚಿಸಿದೆ ಎಂದು ಹೇಳಿದ ಅಧಿಕಾರಿಯೋರ್ವರು, ಉಚ್ಚಾಟಿತ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ದೂರುಗಳನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
----------------------------------------------------------
ಸಿಂಧಿಯಾ ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸವಾರ ಮೃತ್ಯು
ಅಳಪ್ಪುಝಾ(ಕೇರಳ),ಆ.10: ಇಲ್ಲಿಗೆ ಸಮೀಪದ ಪುತ್ತಿಯಾಕಾವು ಎಂಬಲ್ಲಿ ಕೊಚ್ಚಿ-ಅಲಪ್ಪುಝಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಯಾಣಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾನೆ.
ದಿಲ್ಲಿಯಿಂದ ಕೊಚ್ಚಿಗೆ ಆಗಮಿಸಿದ್ದ ಸಿಂಧಿಯಾ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಚೆರ್ತಲಕ್ಕೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು,ಕಾರನ್ನು ಚಾಲಕ ಚಲಾಯಿಸುತ್ತಿದ್ದ.
ಅಪಘಾತದಲ್ಲಿ ಸ್ಥಳೀಯ ನಿವಾಸಿಯಾಗಿದ್ದ ಸವಾರ ಶಶಿ(65) ತೀವ್ರವಾಗಿ ಗಾಯಗೊಂಡಿದ್ದು,ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಿಂಧಿಯಾ ಬೇರೆ ಕಾರಿನಲ್ಲಿ ಪ್ರಯಾಣ ಮುಂದುವರಿಸಿದರು.





