ಈಶ್ವರಪ್ಪ ಬ್ರಿಗೇಡ್ ಯಾರ ವಿರುದ್ಧ?

ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಆಯ್ಕೆಯಾಗಿದ್ದಾರಾದರೂ ಪಕ್ಷ ಸಂಘಟನೆಯಲ್ಲಿ ಅವರು ಇನ್ನೂ ವಿಶೇಷ ಆಸಕ್ತಿ ತೋರಿಸಿಲ್ಲ. ಇತ್ತ ಉಳಿದ ನಾಯಕರೂ ಮಾಧ್ಯಮಗಳಲ್ಲಿ ‘ಯಡಿಯೂರಪ್ಪರೇ ನಾಯಕ’ಎಂದು ಹೇಳುತ್ತಾರಾದರೂ, ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಸಭೆ ಮಾಡುತ್ತಿದ್ದಾರೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಸಂಬಂಧವಂತೂ ಸರಿಪಡಿಸಲಾರದಷ್ಟು ಹಳಸಿದೆ. ಇತ್ತೀಚೆಗೆ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಈಶ್ವರಪ್ಪ ಅವರ ಜನರನ್ನು ಸಾರಾಸಗಟಾಗಿ ಹೊರಗಿಟ್ಟಿದ್ದರು. ಇದರ ವಿರುದ್ಧ ಬಹಿರಂಗವಾಗಿಯೇ ಈಶ್ವರಪ್ಪ ಟೀಕೆ ಮಾಡಿದ್ದರು ಮಾತ್ರವಲ್ಲ, ದಿಲ್ಲಿಗೆ ನಿಯೋಗವನ್ನೂ ಒಯ್ದಿದ್ದರು. ಆದರೆ ಈಶ್ವರಪ್ಪ ಅವರಿಗೆ ಸರಿಯಾದ ಸ್ಪಂದನೆ ದಿಲ್ಲಿಯಲ್ಲಿ ಸಿಗಲಿಲ್ಲ. ಈ ಎಲ್ಲಾ ಕಾರಣಗಳಿಂದ ಬಿಜೆಪಿಯೊಳಗೆ ಬಿರುಕುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲೇ ಪೂರ್ಣ ಪ್ರಮಾಣದಲ್ಲಿ ಪಕ್ಷಕಟ್ಟುವುದಕ್ಕೆ ಯಡಿಯೂರಪ್ಪ ಆಸಕ್ತಿ ತೋರಿಸುತ್ತಿಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದರೆ, ಮತ್ತೆ ತನಗೆ ವಂಚನೆಯಾಗಬಹುದು ಎನ್ನುವ ಅಭದ್ರತೆ ಅವರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಈಶ್ವರಪ್ಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತನ್ನದೇ ಒಂದು ಬ್ರಿಗೇಡನ್ನು ಕಟ್ಟಲು ಮುಂದಾಗಿದ್ದಾರೆ. ಈ ಬ್ರಿಗೇಡ್ ಬಿಜೆಪಿಯನ್ನು ಸಂಘಟಿಸುವುದರ ಬದಲು, ಅದರೊಳಗಿರುವ ಹಿಂದುಳಿದ ಮತ್ತು ದಲಿತರನ್ನು ಸಂಘಟಿಸುವ ಗುರಿಯನ್ನು ಹೊಂದಿದೆ. ಆ ಮೂಲಕ, ಬಿಜೆಪಿಯೊಳಗೆ ತನ್ನ ಸಾಮರ್ಥ್ಯವನ್ನು ನಾಯಕರಿಗೆ ಪ್ರದರ್ಶಿಸುವ ಯೋಜನೆಯನ್ನು ಅವರು ಹಾಕಿಕೊಂಡಂತಿದೆ. ಇದೊಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ‘ಅಹಿಂದ’ದ ನಕಲು. ಆದರೆ ಅಲ್ಲಿ ಶೋಷಿತ ವರ್ಗವನ್ನು ಸಂಘಟಿಸುವ, ಅದನ್ನೊಂದು ಚಳವಳಿಯನ್ನಾಗಿಸುವ ಮಹದುದ್ದೇಶವಿತ್ತು. ಅದು ಯಾವುದೇ ಪಕ್ಷದ ಅಧೀನದಲ್ಲಿರಲಿಲ್ಲ. ಅಹಿಂದ ಸಂಘಟನೆಯ ಸಂದರ್ಭದಲ್ಲೇ ಅವರು ಜೆಡಿಎಸ್‌ನಿಂದ ಹೊರ ಬಿದ್ದರು. ಮತ್ತೆ ಅದೇ ಅಹಿಂದದೊಳಗಿದ್ದ ಕೆಲವು ಸಮಯಸಾಧಕ ಮುಖಂಡರು ಈಗ ಈಶ್ವರಪ್ಪ ಅವರನ್ನು ಮುಂದಿಟ್ಟು ಹೊಸ ಪ್ರಯತ್ನ ಮಾಡಲು ಹೊರಟಿದ್ದಾರೆ.
ಆದರೆ ಯಾವ ಹೋರಾಟದ ಹಿನ್ನೆಲೆಯೂ ಇಲ್ಲದ, ದೂರದೃಷ್ಟಿಯ ಚಿಂತನೆಗಳನ್ನು ಹೊಂದಿರದ ಈಶ್ವರಪ್ಪ ಈ ಬ್ರಿಗೇಡನ್ನು ಕಟ್ಟಲು ಹೊರಟಿರುವುದೇ ಬಿಜೆಪಿಯೊಳಗಿನ ಲಿಂಗಾಯತ ಮತ್ತು ಬ್ರಾಹ್ಮಣ ಲಾಬಿಯ ವಿರುದ್ಧ. ಸದ್ಯಕ್ಕೆ ಈಶ್ವರಪ್ಪ ಬಿಜೆಪಿಯೊಳಗೆ ಎಷ್ಟರಮಟ್ಟಿಗೆ ಉಪೇಕ್ಷೆಗೆ ಒಳಗಾಗಿದ್ದಾರೆ ಎಂದರೆ ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದೂ ಕಷ್ಟವಾಗಬಹುದು. ಇದು ಈಶ್ವರಪ್ಪ ಅವರ ಅನುಭವಕ್ಕೂ ಬಂದಿರುವುದರಿಂದ ಅವರು ಹೊಸತೊಂದು ಬ್ರಿಗೇಡನ್ನು ಕಟ್ಟಲು ಹೊರಟಿದ್ದಾರೆ. ಅದಕ್ಕೆ ಸಂಗೊಳ್ಳಿ ರಾಯಣ್ಣನಂತಹ ಐತಿಹಾಸಿಕ ನಾಯಕನ ಹೆಸರನ್ನು ಇಡಲೂ ಮುಂದಾಗಿದ್ದಾರೆ. ಈ ಹಿಂದೆ ಮೋದಿ ಬ್ರಿಗೇಡ್ ರಾಜ್ಯಾದ್ಯಂತ ದ್ವೇಷ ಚಿಂತನೆಗಳನ್ನು ಹರಡುವುದಕ್ಕಾಗಿಯೇ ಹುಟ್ಟಿಕೊಂಡಿತ್ತು. ಆ ಬ್ರಿಗೇಡ್‌ನ ಮುಖ್ಯಸ್ಥನೊಬ್ಬ ಇದೀಗ ಕೊಲೆಗಾರನಾಗಿ ಜೈಲು ಸೇರಿದ್ದಾನೆ. ವಿಷ ಬೀಜವನ್ನು ಬಿತ್ತಿದರೆ ಅದು ವಿಷದ ಫಲವನ್ನಲ್ಲದೆ ಇನ್ನೇನು ನೀಡೀತು? ನರೇಂದ್ರ ಮೋದಿಗಾದರೂ ರಾಷ್ಟ್ರೀಯ ವರ್ಚಸ್ಸಿತ್ತು. ಈ ಬ್ರಿಗೇಡ್‌ನ ಉದ್ದೇಶ ಮೋದಿಯನ್ನು ಪ್ರಧಾನಿ ಮಾಡುವುದಾಗಿತ್ತು. ಅದರಲ್ಲಿ ಯಶಸ್ವಿಯಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಈಶ್ವರಪ್ಪ ಅವರ ವ್ಯಕ್ತಿತ್ವ ಇಡೀ ರಾಜ್ಯಕ್ಕೆ ಗೊತ್ತಿದೆ. ಒಂದು ರೀತಿಯಲ್ಲಿ ಇವರು ಸಂಘಪರಿವಾರದ ಬಲಿಪಶು. ಆರೆಸ್ಸೆಸ್‌ನಿಂದ ಮೂಡಿಬಂದವರಾದರೂ ದಿ. ವಿ. ಎಸ್. ಆಚಾರ್ಯ, ಸುರೇಶ್ ಕುಮಾರ್ ಮಾಧ್ಯಮಗಳ ಮೂಲಕ ಸಜ್ಜನ ರಾಜಕಾರಣಿಗಳು ಎಂದೇ ಗುರುತಿಸಿಕೊಳ್ಳುತ್ತಾರೆ. ಆದರೆ ಶೂದ್ರರ ಮೂಲಕ ದ್ವೇಷದ ಹೇಳಿಕೆಯನ್ನು ನೀಡಿಸಿ, ಅವರನ್ನು ಖಳರನ್ನಾಗಿಸುತ್ತಾರೆ. ಇಲ್ಲಿ ಈಶ್ವರಪ್ಪ ಕೂಡ ಅದೇ ರೀತಿಯಲ್ಲಿ ಬಳಸಲ್ಪಟ್ಟಿದ್ದಾರೆ.
ಅವರೀಗ ತಮ್ಮ ಬ್ರಿಗೇಡಿಗೆ ‘ಸಂಗೊಳ್ಳಿ ರಾಯಣ್ಣ’ನ ಹೆಸರನ್ನು ಇಡಲು ಮುಂದಾಗಿದ್ದಾರೆ. ಈಶ್ವರಪ್ಪ ಹಿನ್ನೆಲೆ ಗೊತ್ತಿದ್ದವರಿಗೆ ಇವರ ಬ್ರಿಗೇಡ್‌ನಲ್ಲಿರುವ ಜನರ, ಕಾರ್ಯಕರ್ತರ ಹಿನ್ನೆಲೆ ಊಹಿಸುವುದು ಕಷ್ಟವಲ್ಲ. ನಾಳೆ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಇವರು ಬೀದಿಯಲ್ಲಿ ಕಂಡವರ ಅಂಗಡಿಗಳನ್ನು ದೋಚ ತೊಡಗಿದರೆ ಅದರ ಕಳಂಕಗಳನ್ನೆಲ್ಲ ರಾಯಣ್ಣನೇ ಹೊತ್ತುಕೊಳ್ಳಬೇಕಾಗುತ್ತದೆ. ಆದುದರಿಂದ, ಈಶ್ವರಪ್ಪ ತನ್ನ ಬ್ರಿಗೇಡಿಗೆ ಸಂಗೊಳ್ಳಿ ರಾಯಣ್ಣನ ಹೆಸರನ್ನು ಇಡುವುದಕ್ಕೆ ಎಲ್ಲ ನಾಡಪ್ರೇಮಿಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕಾಗಿದೆ. ನಕಲಿ ದೇಶಭಕ್ತರು, ಕ್ರಿಮಿನಲ್‌ಗಳು ಸಂಗೊಳ್ಳಿ ರಾಯಣ್ಣನ ಹೆಸರಲ್ಲಿ ಬೀದಿರಂಪ ಮಾಡುವುದನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನರೇಂದ್ರ ಮೋದಿ ನಕಲಿ ಗೋರಕ್ಷಕರ ಕುರಿತಂತೆ ನೀಡಿರುವ ಹೇಳಿಕೆಯನ್ನು ಇದೇ ಸಂದರ್ಭದಲ್ಲಿ ಈಶ್ವರಪ್ಪ ಬೆಂಬಲಿಸಿದ್ದಾರೆ. ಸಾರ್ವಜನಿಕವಾಗಿ ಹಲ್ಲೆ ನಡೆಸುವ ಅಧಿಕಾರವನ್ನು ಇವರಿಗೆ ಕೊಟ್ಟವರಾರು ಎಂದೂ ಕೇಳಿದ್ದಾರೆ. ಅವರ ಮಾತೇನೋ ಒಪ್ಪತಕ್ಕಂತಹದು. ಆದರೆ ಇದೇ ಈಶ್ವರಪ್ಪ ಅವರು ಕೆಲವು ವರ್ಷಗಳ ಹಿಂದೆ ‘‘ಗೋಮಾಂಸ ತಿನ್ನುವವರ ಕೈ ಕತ್ತರಿಸಬೇಕು...ಕಾಲು ಕತ್ತರಿಸಬೇಕು’’ ಎಂಬಂತಹ ಹೇಳಿಕೆಗಳನ್ನು ನೀಡಿದ್ದರು. ಗೋರಕ್ಷಕರಿಗೆ ಇವರ ಈ ಹೇಳಿಕೆಗಳೂ ಸ್ಫೂರ್ತಿಯಾಗಿವೆ ಎನ್ನುವುದನ್ನು ಅವರು ಮರೆತಿದ್ದಾರೆ. ಒಂದು ಕಾಲದಲ್ಲಿ ಬಹಿರಂಗವಾಗಿ ನಕಲಿ ಗೋರಕ್ಷಕರ ಪರವಾಗಿ ಮಾತನಾಡಿದ್ದ ಈಶ್ವರಪ್ಪ ಇಂದು ನರೇಂದ್ರ ಮೋದಿಯ ಮಾತಿಗೆ ತಲೆದೂಗುವುದನ್ನು ಹೇಗೆ ಸ್ವೀಕರಿಸಬೇಕು? ಈಶ್ವರಪ್ಪನವರನ್ನು ಈಗಾಗಲೇ ಮಾನಸಿಕ ಅಸ್ವಸ್ಥ ಎಂದೆಲ್ಲ ರಾಜಕೀಯ ನಾಯಕರು ಟೀಕಿಸುತ್ತಿದ್ದಾರೆ. ಅಂದರೆ ಅವರ ಮಾತಿನಲ್ಲಿ ಸ್ಥಿಮಿತತೆಯಿಲ್ಲ ಎನ್ನುವುದು ಆಕ್ಷೇಪ. ಇದೀಗ ಬ್ರಿಗೇಡ್ ಕಟ್ಟಲು ಹೊರಟಿರುವ ಈಶ್ವರಪ್ಪ ತನ್ನ ರಾಜಕೀಯ ಉಳಿವಿಗಾಗಿ ನಡೆಸುವ ಅಂತಿಮ ಪ್ರಯತ್ನವಾಗಿದೆ. ಈ ಪ್ರಯತ್ನದಲ್ಲಿ ಅವರು ವಿಫಲವಾದರೆ, ತನ್ನ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜೊತೆಗೆ ಬಿಜೆಪಿಗೆ ತಿರುಗಿ ಬೀಳುವ ಸಾಧ್ಯತೆಗಳಿವೆ. ಬಿಜೆಪಿ ರಾಜ್ಯದಲ್ಲಿ ಸದ್ಯಕ್ಕಂತೂ ಚಿಗುರುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿಯನ್ನು ನಾಶ ಮಾಡಲು ಬಿಜೆಪಿಯವರೇ ಹೊಂಚು ಹಾಕುತ್ತಿರುವುದರಿಂದ ಸಿದ್ದರಾಮಯ್ಯ ಸರಕಾರ ಒಂದಷ್ಟು ನಿರಾಳವಾಗಿ ಆಡಳಿತ ನಡೆಸಲು ಸಾಧ್ಯವಾಗಬಹುದು.







