.......................................
ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಸಿಆರ್‌ಝಡ್ ನಿಯಮ: ಪಿಣರಾಯಿ
 ತಿರುವನಂತಪುರ,ಆ.10: ಕೇಂದ್ರ ಸರಕಾರವು ಹೊರಡಿಸಿರುವ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್) ಅಧಿಸೂಚನೆಯಲ್ಲಿನ ನಿರ್ಬಂಧಗಳಿಂದಾಗಿ ಜನರು, ವಿಶೇಷವಾಗಿ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ವಾಸವಾಗಿರುವ ಮೀನುಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಇಲ್ಲಿ ತಿಳಿಸಿದರು.
‘ಕರಾವಳಿ ರಕ್ಷಣೆ ಮತ್ತು ನಿರ್ವಹಣೆ, ಕೇರಳ’ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಗ್ರ ಕರಾವಳಿ ವಲಯ ನಿರ್ವಹಣೆ(ಐಸಿಝಡ್‌ಎಂ) ಯೋಜನೆಯನ್ನು ರಾಜ್ಯವು ರೂಪಿಸಲಿದೆ ಮತ್ತು ಅದರ ಅನುಷ್ಠಾನಕ್ಕಾಗಿ ಕೇಂದ್ರದ ಅನುಮತಿಯನ್ನು ಕೋರಲಿದೆ ಎಂದರು.
ಕೇಂದ್ರವು 2011ರಲ್ಲಿ ಸಿಆರ್‌ಝಡ್ ಅಧಿಸೂಚನೆಯನ್ನು ಹೊರಡಿಸಿದ ಸಂದರ್ಭ ಒಂದು ವರ್ಷದೊಳಗೆ ಇಂತಹ ಯೋಜನೆಯನ್ನು ರೂಪಿಸುವಂತೆ ಹಾಗೂ ಪರಿಸರ ಮತ್ತು ಅರಣ್ಯ ಸಚಿವಾಲಯದ ಒಪ್ಪಿಗೆಯನ್ನು ಪಡೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿತ್ತು, ಆದರೆ ಕೇರಳವು ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಿರಲಿಲ್ಲ ಎಂದು ಅವರು ತಿಳಿಸಿದರು.
ಸಿಆರ್‌ಝಡ್‌ನಡಿಯ ನಿರ್ಬಂಧಗಳಿಂದಾಗಿ ಕರಾವಳಿ ಪ್ರದೇಶಗಳಲ್ಲಿಯ ಜನರಿಗೆ ಹೊಸಮನೆಗಳ ನಿರ್ಮಾಣ ಸಾಧ್ಯವಾಗುತ್ತಿಲ್ಲ ಮತ್ತು ಹಾಲಿ ವಾಸವಿರುವ ಮನೆಗಳ ರಿಪೇರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತಿಲ್ಲ. ರಾಜ್ಯದ ಐಸಿಝಡ್‌ಎಂ ಯೋಜನೆಗೆ ಅನುಮತಿ ಪಡೆದುಕೊಳ್ಳುವ ಮೂಲಕ ಮಾತ್ರವೇ ಕರಾವಳಿ ಪ್ರದೇಶಗಳ ಜನರ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಪಿಣರಾಯಿ ತಿಳಿಸಿದರು. ..............................
ಕೂಡಂಕುಳಂ ಮೊದಲ ಅಣು ವಿದ್ಯುತ್ ಘಟಕ ರಾಷ್ಟ್ರಾರ್ಪಣೆ ಚೆನ್ನೈ, ಆ.10: ಪ್ರಧಾನಿ ನರೇಂದ್ರ ಮೋದಿ, ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ 1ನೆ ಘಟಕವನ್ನು ಬುಧವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಸಚಿವ ಪೊನ್ ರಾಧಾಕೃಷ್ಣರನ್ನೊಳಗೊಂಡ ಅವರ ತಂಡ ಹೊಸದಿಲ್ಲಿಯಿಂದ ವೀಡಿಯೊ ಕಾನ್ಫರೆನ್ಸ್‌ಗೆ ಸೇರಿದ್ದರೆ, ಪುತಿನ್ ಮಾಸ್ಕೊದ ತನ್ನ ಕಚೇರಿ ಯಿಂದ ಹಾಗೂ ಜಯಲಲಿತಾ ಚೆನ್ನೈಯ ರಾಜ್ಯ ಕಾರ್ಯಾಲಯದಿಂದ ಅದರಲ್ಲಿ ಭಾಗವಹಿಸಿದ್ದರು.
ಭಾರತದಲ್ಲಿ ಸ್ವಚ್ಛ ಇಂಧನ ಉತ್ಪಾದನೆಯನ್ನು ಸತತವಾಗಿ ಹೆಚ್ಚಿಸುವ ಪ್ರಯತ್ನಕ್ಕೆ ಕೂಡಂಕುಳಂ 1ನೆ ಘಟಕವು ಪ್ರಮುಖ ಸೇರ್ಪಡೆಯಾಗಿದೆ. ಅಲ್ಲದೆ, ಇದು ಹಸಿರು ಬೆಳವಣಿಗೆಯ ಭಾಗಿದಾರಿಕೆಗೆ ಮಾರ್ಗ ನಿರ್ಮಾಣದ ನಮ್ಮ ಜಂಟಿ ಬದ್ಧತೆಯ ದ್ಯೋತಕವಾಗಿದೆಯೆಂದು ಮೋದಿ ಹೇಳಿದ್ದಾರೆ.
ಕೂಡಂಕುಳಂನಲ್ಲಿ ತಲಾ 1 ಸಾವಿರ ಮೆ.ವಾ. ಸಾಮರ್ಥ್ಯದ ಇನ್ನೂ 5 ಘಟಕಗಳನ್ನು ಸ್ಥಾಪಿಸಲಾಗುವುದೆಂದು ಅವರು ತಿಳಿಸಿದ್ದಾರೆ.
1ನೆ ಘಟಕವು 2013ರ ಜುಲೈಯಲ್ಲಿ ಕಾರ್ಯಾರಂಭಗೊಂಡಿದ್ದರೂ, ಈ ವರ್ಷಾರಂಭದಲ್ಲಷ್ಟೇ ಸತತ ವಿದ್ಯುದುತ್ಪಾದನೆ ಯನ್ನು ಆರಂಭಿಸಿದೆ. ಇದುವರೆಗೆ ಘಟಕ ದಿಂದ 1 ಸಾವಿರ ಕೋಟಿ ಯುನಿಟ್ ವಿದ್ಯುದುತ್ಪಾದನೆಯಾಗಿದೆ.