ಸಂಘಪರಿವಾರದವರಿಗೆ ಪೊಲೀಸರ ಸಹಕಾರ: ಸಿ.ಎಂ.ಇಬ್ರಾಹೀಂ
ಗೋರಕ್ಷಣೆ ಹೆಸರಲ್ಲಿ ಜಾನುವಾರುಗಳ ಸಾಗಾಟಕ್ಕೆ ತಡೆ ಸಂಘಪರಿವಾರದವರಿಗೆ ಪೊಲೀಸರ ಸಹಕಾರ: ಸಿ.ಎಂ.ಇಬ್ರಾಹೀಂ

ಬೆಂಗಳೂರು, ಆ.10: ಗೋರಕ್ಷಣೆಯ ಹೆಸರಿನಲ್ಲಿ ಜಾನುವಾರುಗಳನ್ನು ಸಾಗಿಸುವವರ ಮೇಲೆ ಸಂಘಪರಿವಾರದ ಕಾರ್ಯ ಕರ್ತರು ಪೊಲೀಸರ ನೆರವಿನೊಂದಿಗೆ ಹಲ್ಲೆ ನಡೆಸುತ್ತಿರುವುದು ಸರಿಯಲ್ಲ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹೀಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾನುವಾರುಗಳನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ಸಾಗಾಟ ಮಾಡುವುದು ಅಪರಾಧವೇನಲ್ಲ. ಆದರೂ, ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸುವುದು ಅಕ್ಷಮ್ಯ ಎಂದರು.
ಜಾನುವಾರುಗಳ ಸಾಗಾಟ ಹಾಗೂ ಅವುಗಳ ಹತ್ಯೆ ಎರಡು ವಿಭಿನ್ನವಾದದ್ದು. ಪದೇ ಪದೇ ಜಾನುವಾರುಗಳನ್ನು ಸಾಗಿಸುವವರನ್ನು ಹಿಡಿದು ಥಳಿಸುವ ಘಟನೆಗಳು ಜರಗುತ್ತಿವೆ. ಕೆಲವೇ ದಿನಗಳಲ್ಲಿ ಬಕ್ರೀದ್ ಹಬ್ಬ ಬರಲಿದ್ದು, ಇಂತಹ ಘಟನೆಗಳು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದರು.
ಭ್ರಮನಿರಸನ: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರು ಭ್ರಮನಿರಸನ ಗೊಂಡಿದ್ದಾರೆ. ಯಾವ ಉದ್ದೇಶವನ್ನಿಟ್ಟುಕೊಂಡು ಅಲ್ಪಸಂಖ್ಯಾ ತರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರೋ ದುರದೃಷ್ಟವಶಾತ್ ಅದು ಈಡೇರುತ್ತಿಲ್ಲ ಎಂದು ಇಬ್ರಾಹೀಂ ತಿಳಿಸಿದರು.
ಸರಕಾರಕ್ಕೆ ಇನ್ನೂ ಸುಮಾರು ಒಂದೂವರೆ ವರ್ಷಗಳ ಕಾಲಾವಕಾಶವಿದೆ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಅಲ್ಪಸಂ ಖ್ಯಾತರಿಗೆ ಸಿಗಬೇಕಾದ ನ್ಯಾಯಸಮ್ಮತವಾದ ಹಕ್ಕುಗಳು ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಷ್ಟವಾಗುವುದು ಸ್ಪಷ್ಟ ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯಕ್ಕೆ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಪರವಾಗಿರುವಂತಹ ಸರಕಾರ ಬೇಕು. ಪ್ರತಿಯೊಂದು ಸಮುದಾಯವು ರಾಜಕೀಯವಾಗಿ ಒಬ್ಬೊಬ್ಬ ನಾಯಕನನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಮುಸ್ಲಿಮ್ ಸಮುದಾಯ ವನ್ನು ಪ್ರತಿನಿಧಿಸುವ ನಾಯಕನ ಕೊರತೆಯಿದೆ ಎಂದು ಅವರು ತಿಳಿಸಿದರು.
ಪಂಗಡಗಳ ಸಂಕೋಲೆಯಿಂದ ಹೊರಬಂದು ಧಾರ್ಮಿಕ ಮುಖಂಡರು ಒಂದೇ ವೇದಿಕೆಯಡಿಯಲ್ಲಿ ಸೇರಿ, ನಮ್ಮ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಧಾರ್ಮಿಕ ಮುಖಂಡರು ಒಂದಾದರೆ ರಾಜಕೀಯ ಮುಖಂಡರನ್ನು ಒಂದೆಡೆ ತರುವುದು ಕಷ್ಟವೇನಲ್ಲ ಎಂದು ಇಬ್ರಾಹೀಂ ಹೇಳಿದರು.
ಮುಸ್ಲಿಮ್ ಸಮುದಾಯದವರು ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಎರಡನೆ ಸ್ಥಾನ ದಲ್ಲಿದ್ದಾರೆ. ಒಂದೇ ಪಕ್ಷವನ್ನು ನಂಬಿಕೊಂಡಿರುವುದರಿಂದ ನಾವು ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ಮುಸ್ಲಿಮ್ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಬೇಕು ಎಂದು ಅವರು ಕರೆ ನೀಡಿದರು.





