ದಕ್ಷಿಣ ಚೀನಾ ಸಮುದ್ರಕ್ಕೆ ಸದ್ದಿಲ್ಲದೆ ರಾಕೆಟ್ ಉಡಾವಕಗಳನ್ನು ಸಾಗಿಸುತ್ತಿರುವ ವಿಯೆಟ್ನಾಮ್
ಪಾಶ್ಚಾತ್ಯ ರಾಜತಾಂತ್ರಿಕರು
ಹಾಂಕಾಂಗ್, ಆ. 10: ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿರುವ ತನ್ನ ದ್ವೀಪಗಳನ್ನು ವಿಯೆಟ್ನಾಮ್ ಸದ್ದಿಲ್ಲದೆ ಬಲಪಡಿಸುತ್ತಿದ್ದು, ವ್ಯಾಪಾರ ಮಾರ್ಗದ ಇನ್ನೊಂದು ಬದಿಯಲ್ಲಿರುವ ಚೀನಾದ ರನ್‌ವೇಗಳು ಮತ್ತು ಸೇನಾ ಸಂಸ್ಥಾಪನೆಗಳ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ನೂತನ ಸಂಚಾರಿ ರಾಕೆಟ್ ಉಡಾವಕಗಳನ್ನು ನಿಯೋಜಿಸಿದೆ ಎಂದು ಪಾಶ್ಚಾತ್ಯ ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ವಿಯೆಟ್ನಾಮ್ ಸಂಚಾರಿ ಉಡಾವಕಗಳನ್ನು ತನ್ನ ಪ್ರಧಾನ ನೆಲದಿಂದ ಸ್ಪ್ರಾಟ್ಲಿ ದ್ವೀಪ ಸಮೂಹದಲ್ಲಿರುವ ಐದು ನೆಲೆಗಳಿಗೆ ಸಾಗಿಸಿದೆ ಎನ್ನುವುದು ಗೂಢಚಾರಿಕೆಯಿಂದ ತಿಳಿದುಬಂದಿದೆ ಎಂದು ರಾಜತಾಂತ್ರಿಕರು ಮತ್ತು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರಮ ಚೀನಾದ ಜೊತೆ ಉದ್ವಿಗ್ನತೆಯನ್ನು ಸೃಷ್ಟಿಸುವುದು ಖಚಿತವಾಗಿದೆ.
ಈ ಉಡಾವಕಗಳನ್ನು ವಾಯು ಸರ್ವೇಕ್ಷಣೆಯಿಂದ ಅಡಗಿಸಿಡಲಾಗಿದೆ ಹಾಗೂ ಅವುಗಳಿಗೆ ಶಸ್ತ್ರಗಳನ್ನು ಇನ್ನಷ್ಟೇ ಅಳವಡಿಸಬೇಕಾಗಿದೆ. ಆದರೆ, ಇನ್ನು ಎರಡು ಮೂರು ದಿನಗಳಲ್ಲಿ ರಾಕೆಟ್‌ಗಳನ್ನು ಅದಕ್ಕೆ ಜೋಡಿಸಿ ಅವುಗಳನ್ನು ಕಾರ್ಯಸಜ್ಜು ಗೊಳಿಸ ಬಹುದಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ.
ಆದರೆ, ಈ ಮಾಹಿತಿ ತಪ್ಪು ಎಂಬುದಾಗಿ ವಿಯೆಟ್ನಾಮ್‌ನ ವಿದೇಶ ಸಚಿವಾಲಯ ತಿಳಿಸಿದೆ. ಆದಾಗ್ಯೂ, ಅದು ಹೆಚ್ಚಿನ ಮಾಹಿತಿಯನ್ನು ಒದಗಿಸಿಲ್ಲ.
ವಿಯೆಟ್ನಾಮ್ ಸ್ಪ್ರಾಟ್ಲಿ ದ್ವೀಪಗಳಲ್ಲಿ ಇಂಥ ಯಾವುದೇ ಉಡಾವಕಗಳು ಅಥವಾ ಶಸ್ತ್ರಗಳನ್ನು ನಿಯೋಜಿಸಿಲ್ಲ ಎಂಬುದಾಗಿ ಉಪ ರಕ್ಷಣಾ ಸಚಿವ ಸೀನಿಯರ್ ಲೆಫ್ಟಿನೆಂಟ್ ಜನರಲ್ ನಗುಯೆನ್ ಚಿ ವಿನ್ ಸಿಂಗಾಪುರದಲ್ಲಿ ಜೂನ್‌ನಲ್ಲಿ ‘ರಾಯ್ಟರ್ಸ್’ಗೆ ಹೇಳಿದ್ದರು. ಆರೆ, ಇಂಥ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಕಾದಿರಿಸಿದ್ದರು.
‘‘ಆತ್ಮರಕ್ಷಣೆಗಾಗಿ ನಮ್ಮ ಸಾರ್ವಭೌಮ ಭೂಭಾಗದ ವ್ಯಾಪ್ತಿಯಲ್ಲಿರುವ ಯಾವುದೇ ಪ್ರದೇಶಕ್ಕೆ ಯಾವುದೇ ಸಮಯದಲ್ಲಿ ನಮ್ಮ ಯಾವುದೇ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಕಾನೂನುಬದ್ಧ ಹಕ್ಕು ನಮಗಿದೆ’’ ಎಂದು ಅವರು ಹೇಳಿದ್ದರು.
ಸ್ಪ್ರಾಟ್ಲಿ ದ್ವೀಪ ಸಮೂಹದಲ್ಲಿರುವ ತನ್ನ ಏಳು ದ್ವೀಪಗಳಲ್ಲಿ ಚೀನಾ ನಡೆಸುತ್ತಿರುವ ನಿರ್ಮಾಣ ಕಾರ್ಯಗಳಿಗೆ ಪ್ರತಿಯಾಗಿ ವಿಯೆಟ್ನಾಮ್ ಈ ಕ್ರಮಗಳನ್ನು ತೆಗೆದುಕೊಂಡಿದೆ.
ಈ ದ್ವೀಪಗಳಲ್ಲಿ ಚೀನಾ ರನ್‌ವೇಗಳು, ರಾಡಾರ್‌ಗಳು ಮತ್ತು ಇತರ ಸೇನಾ ಸಂಸ್ಥಾಪನೆಗಳನ್ನು ನಿರ್ಮಿಸುತ್ತಿರುವುದು ವಿಯೆಟ್ನಾಮ್‌ನ ಭದ್ರತೆಗೆ ಕುತ್ತಾಗಿ ಪರಿಣಮಿಸುತ್ತಿದೆ ಎಂಬುದಾಗಿ ಆ ದೇಶದ ಸೇನಾ ವ್ಯೆಹ ತಜ್ಞರು ಭಾವಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಐತಿಹಾಸಿಕ ಹಕ್ಕುಗಳನ್ನು ಹೊಂದಿಲ್ಲ ಎಂಬುದಾಗಿ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಪಂಚಾಯಿತ್ ನ್ಯಾಯಾಲಯ ಕಳೆದ ತಿಂಗಳು ತೀರ್ಪು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಫಿಲಿಪ್ಪೀನ್ಸ್‌ನ ಪರವಾಗಿ ಬಂದಿರುವ ಈ ತೀರ್ಪನ್ನು ಚೀನಾ ಈಗಾಗಲೇ ತಿರಸ್ಕರಿಸಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.







