ಕೂಡಂಕುಳಂ ಮೊದಲ ಅಣು ವಿದ್ಯುತ್ ಘಟಕ ರಾಷ್ಟ್ರಾರ್ಪಣೆ
ಚೆನ್ನೈ, ಆ.10: ಪ್ರಧಾನಿ ನರೇಂದ್ರ ಮೋದಿ, ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ 1ನೆ ಘಟಕವನ್ನು ಬುಧವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಸಚಿವ ಪೊನ್ ರಾಧಾಕೃಷ್ಣರನ್ನೊಳಗೊಂಡ ಅವರ ತಂಡ ಹೊಸದಿಲ್ಲಿಯಿಂದ ವೀಡಿಯೊ ಕಾನ್ಫರೆನ್ಸ್‌ಗೆ ಸೇರಿದ್ದರೆ, ಪುತಿನ್ ಮಾಸ್ಕೊದ ತನ್ನ ಕಚೇರಿ ಯಿಂದ ಹಾಗೂ ಜಯಲಲಿತಾ ಚೆನ್ನೈಯ ರಾಜ್ಯ ಕಾರ್ಯಾಲಯದಿಂದ ಅದರಲ್ಲಿ ಭಾಗವಹಿಸಿದ್ದರು.
ಭಾರತದಲ್ಲಿ ಸ್ವಚ್ಛ ಇಂಧನ ಉತ್ಪಾದನೆಯನ್ನು ಸತತವಾಗಿ ಹೆಚ್ಚಿಸುವ ಪ್ರಯತ್ನಕ್ಕೆ ಕೂಡಂಕುಳಂ 1ನೆ ಘಟಕವು ಪ್ರಮುಖ ಸೇರ್ಪಡೆಯಾಗಿದೆ. ಅಲ್ಲದೆ, ಇದು ಹಸಿರು ಬೆಳವಣಿಗೆಯ ಭಾಗಿದಾರಿಕೆಗೆ ಮಾರ್ಗ ನಿರ್ಮಾಣದ ನಮ್ಮ ಜಂಟಿ ಬದ್ಧತೆಯ ದ್ಯೋತಕವಾಗಿದೆಯೆಂದು ಮೋದಿ ಹೇಳಿದ್ದಾರೆ.
ಕೂಡಂಕುಳಂನಲ್ಲಿ ತಲಾ 1 ಸಾವಿರ ಮೆ.ವಾ. ಸಾಮರ್ಥ್ಯದ ಇನ್ನೂ 5 ಘಟಕಗಳನ್ನು ಸ್ಥಾಪಿಸಲಾಗುವುದೆಂದು ಅವರು ತಿಳಿಸಿದ್ದಾರೆ.
1ನೆ ಘಟಕವು 2013ರ ಜುಲೈಯಲ್ಲಿ ಕಾರ್ಯಾರಂಭಗೊಂಡಿದ್ದರೂ, ಈ ವರ್ಷಾರಂಭದಲ್ಲಷ್ಟೇ ಸತತ ವಿದ್ಯುದುತ್ಪಾದನೆ ಯನ್ನು ಆರಂಭಿಸಿದೆ. ಇದುವರೆಗೆ ಘಟಕ ದಿಂದ 1 ಸಾವಿರ ಕೋಟಿ ಯುನಿಟ್ ವಿದ್ಯುದುತ್ಪಾದನೆಯಾಗಿದೆ.





