ಹಿಂದಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ: ಸಚಿವ ಪರಮೇಶ್ವರ್
ಮಹಾದಾಯಿ ಹೋರಾಟಗಾರರ ಪ್ರಕರಣ

ಬೆಂಗಳೂರು, ಆ.10: ನ್ಯಾಯಾಧಿಕರಣದ ಮಧ್ಯಾಂತರ ತೀರ್ಪಿನ ಹಿನ್ನೆಲೆಯಲ್ಲಿ ಸ್ಫೋಟಗೊಂಡ ಗಲಭೆ ಹಾಗೂ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಾದಾಯಿ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ದೋಷಾರೋಪಣಾ ಪಟ್ಟಿ ಸಲ್ಲಿಸುವ ಮುನ್ನವೇ ಹಿಂದಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆಗೆ ಬಂದಾಗ ಜಾಮೀನು ವಿರೋಧಿಸದೆಯೇ, ಅಮಾಯಕರು ಹಾಗೂ ನಿರಪರಾಧಿಗಳಿಗೆ ಜಾಮೀನು ಪಡೆಯಲು ನೆರವಾಗಲು ರಾಜ್ಯ ಸಚಿವ ಸಂಪುಟವು ತೀರ್ಮಾನಿಸಿದೆ ಎಂದು ಪ್ರಕಟಿಸಿದರು. ದಂಡ ಪ್ರಕ್ರಿಯಾ ಸಂಹಿತೆಯ ವಿವಿಧ ಪರಿಚ್ಛೇದಗಳ ಅಡಿಯಲ್ಲಿ ಈ ಗಲಭೆಗೆ ಸಂಬಂಧಿಸಿದಂತೆ 187 ವ್ಯಕ್ತಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 25 ಪ್ರಥಮ ಮಾಹಿತಿ ವರದಿಗಳು ನೋಂದಾಯಿತವಾಗಿವೆ. ರಾಜ್ಯ ಪೊಲೀಸ್ ಅಪರ ಮಹಾ ನಿರ್ದೇಶಕ ರಾಘವೇಂದ್ರ ಔರಾದ್‌ಕರ್ ಅವರ ನೇತೃತ್ವದ ದ್ವಿ-ಸದಸ್ಯ ಸಮಿತಿಯು ಸಲ್ಲಿಸಿರುವ ಮಧ್ಯಾಂತರ ವರದಿಯನ್ನೂ ಸಚಿವ ಸಂಪುಟವು ಇಲ್ಲಿ ಇಂದು ಪರಾಮರ್ಶಿಸಿದೆ. ಅಲ್ಲದೆ, ಅಂತಿಮ ವರದಿ ಸಲ್ಲಿಸಲು ಸಮಯ ಕೋರಿದ್ದ ಒಂದು ತಿಂಗಳ ಕಾಲಾವಕಾಶದ ಬದಲಿಗೆ 15 ದಿನಗಳೊಳಗೆ ವರದಿ ನೀಡಲು ಸೂಚಿಸಿದೆ ಎಂದು ಸಚಿವರು ತಿಳಿಸಿದರು.





