ರಾಷ್ಟ್ರಪತಿ,ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನ ಏರಿಕೆಗೆ ಸರಕಾರದ ಚಿಂತನೆ
ಹೊಸದಿಲ್ಲಿ,ಆ.10: ಏಳನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದೊಂದಿಗೆ ದೇಶದ ಅತ್ಯುನ್ನತ ಅಧಿಕಾರಿಯು ರಾಷ್ಟ್ರಪತಿಯವರಿಗಿಂತ ಒಂದು ಲಕ್ಷ ರೂ.ಹೆಚ್ಚು ವೇತನವನ್ನು ಜೇಬಿಗಿಳಿಸುತ್ತಿರುವ ವಿಲಕ್ಷಣ ಸ್ಥಿತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ರಾಷ್ಟ್ರಪತಿ,ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನ ಹೆಚ್ಚಳಕ್ಕೆ ಪ್ರಸ್ತಾವನೆಯೊಂದನ್ನು ಸಿದ್ಧಗೊಳಿಸುತ್ತಿದೆ.
ಶೀಘ್ರವೇ ಈ ಪ್ರಸ್ತಾವನೆಯನ್ನು ಕೇಂದ್ರ ಸಂಪುಟದ ಒಪ್ಪಿಗೆಗಾಗಿ ಸಲ್ಲಿಸಲಾಗುವುದು.
ಪ್ರಸಕ್ತ ರಾಷ್ಟ್ರಪತಿಯವರು 1.50 ಲ.ರೂ.,ಉಪರಾಷ್ಟ್ರಪತಿಯವರು 1.25 ಲ.ರೂ. ಮತ್ತು ರಾಜ್ಯಪಾಲರು 1.10 ಲ.ರೂ. ಮಾಸಿಕ ವೇತನಗಳನ್ನು ಪಡೆಯುತ್ತಿದ್ದಾರೆ.
ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಯ ಬಳಿಕ ದೇಶದ ಅತ್ಯುನ್ನತ ಅಧಿಕಾರಿಯಾಗಿರುವ ಸಂಪುಟ ಕಾರ್ಯದರ್ಶಿ ಮಾಸಿಕ 2.5 ಲ.ರೂ. ಮತ್ತು ಕೇಂದ್ರ ಸರಕಾರದಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿರುವವರು 2.25 ಲ.ರೂ.ಮಾಸಿಕ ವೇತನವನ್ನು ಪಡೆಯುತ್ತಿದ್ದಾರೆ.
ಸಂಪುಟದ ಒಪ್ಪಿಗೆಯ ಬಳಿಕ ಈ ಸಂಬಂಧ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕಾರಕ್ಕಾಗಿ ಮಂಡಿಸಲಾಗುವುದು.
ರಾಷ್ಟ್ರಪತಿ,ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನಗಳನ್ನು ಹಿಂದಿನ ಬಾರಿ 2008ರಲ್ಲಿ ಹೆಚ್ಚಿಸಲಾಗಿತ್ತು. ಆಗ ಮೂರು ಪಟ್ಟು ವೇತನ ಹೆಚ್ಚಳವಾಗಿದ್ದು,ಅಲ್ಲಿಯವರೆಗೆ ರಾಷ್ಟ್ರಪತಿಯವರು50,000 ರೂ.,ಉಪರಾಷ್ಟ್ರಪತಿಯವರು 40,000 ರೂ. ಮತ್ತು ರಾಜ್ಯಪಾಲರು 36,000 ರೂ.ಮಾಸಿಕ ವೇತನಗಳನ್ನು ಪಡೆಯುತ್ತಿದ್ದರು.
ಇದರ ಜೊತೆಗೆ ಮಾಜಿ ರಾಷ್ಟ್ರಪತಿಗಳು, ದಿವಂಗತ ರಾಷ್ಟ್ರಪತಿಗಳ ಪತ್ನಿಯರು,ಮಾಜಿ ಉಪರಾಷ್ಟ್ರಪತಿಗಳು ಮತ್ತು ದಿವಂಗತ ಉಪರಾಷ್ಟ್ರಪತಿಗಳ ಪತ್ನಿಯರು ಹಾಗೂ ಮಾಜಿ ರಾಜ್ಯಪಾಲರ ಪಿಂಚಣಿಗಳನ್ನು ಹೆಚ್ಚಿಸಲು ಪ್ರಸ್ತಾವನೆಗಳು ಸಹ ಸಲ್ಲಿಕೆಯಾಗುವ ನಿರೀಕ್ಷೆಯಿದೆ.







