ಮಸ್ಕತ್:ವಾಹನ ಅಪಘಾತದಲ್ಲಿ ಗಾಯಗೊಂಡ ಗಾಯಾಳು ಭಾರತೀಯನಿಗೆ 73 ಲಕ್ಷ ರೂ. ಪರಿಹಾರ

ಮಸ್ಕತ್, ಆ.11: ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಕೇರಳದ ವ್ಯಕ್ತಿಯೊಬ್ಬನಿಗೆ ಇಲ್ಲಿನ ಅಫೀಲು ನ್ಯಾಯಾಲಯವೊಂದು 73.76 ಲಕ್ಷರೂಪಾಯಿ(42,500 ರಿಯಾಲ್) ನಷ್ಟ ಪರಿಹಾರ ನೀಡಬೇಕೆಂದು ಆದೇಶಿಸಿ ತೀರ್ಪಿತ್ತಿದೆ ಎಂದು ವರದಿಯಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಬರ್ಕ ಎಂಬಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಪಾಲಕ್ಕಾಡ್ ಆಲೂರಿನ ಅನ್ವರ್ ಸಾದಿಕ್‌ಗೆ ಬೃಹತ್ ಮೊತ್ತದ ನಷ್ಟ ಪರಿಹಾರವನ್ನು ನೀಡುವಂತೆ ಇಲ್ಲಿನ ರುಸ್ತಾಖ್ ಅಪೀಲು ಕೋರ್ಟು ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ.
ಬರ್ಕದ ಸೂಖ್ ರಸ್ತೆಯಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಸಾದಿಕ್‌ಗೆ ಅಕ್ಟೋಬರ್ ನಾಲ್ಕರಂದು ಫುಟ್‌ಪಾತ್‌ನಲ್ಲಿ ನಡೆದು ಹೋಗುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್ ಲಾರಿ ಢಿಕ್ಕಿಯಾಗಿತ್ತು. ನಂತರ ಹದಿನೈದು ದಿವಸಗಳ ಕಾಲ ಅವರು ಕೋಮಾಕ್ಕೆ ತುತ್ತಾಗಿದ್ದರು. ಒಂದು ತಿಂಗಳು ಇಲ್ಲಿನ ಅಲ್‌ಖೂದ್ ಸುಲ್ತಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ, ಕೆ.ಎಂ.ಸಿ.ಸಿ. ಸೋಶಿಯಲ್ ಪಾರಂ, ವೀ ಹೆಲ್ಫ್ ಮುಂತಾದ ಸಂಘಟನೆಗಳ ಸಹಾಯದಿಂದ ಸಾದಿಕ್‌ರನ್ನು ಊರಿಗೆ ಕರೆತರಲಾಗಿತ್ತು. ಇವರ ಪ್ರಕರಣವನ್ನು ಖಾಲಿದ್ ಅಲ್ ವಹೈಬಿ ಅಡ್ವೋಕೇಟ್ಸ್‌ನ ಅಡ್ವೋಕೇಟ್ ಎಂ.ಕೆ ಪ್ರಸಾದ್ ವಾದಿಸಿದ್ದರು ಎಂದು ವರದಿ ತಿಳಿಸಿದೆ.





