ಮನೆಯ ಹಿತ್ತಿಲಲ್ಲಿರುವ ಶೂಟಿಂಗ್ ರೇಂಜ್‌ನ್ನು ತೆಗೆದು ತರಕಾರಿ ಬೆಳೆಯುವೆ: ಶೂಟಿಂಗ್ ತಾರೆ ಅಭಿನವ್ ಬಿಂದ್ರ

ರಿಯೊ ಡಿ ಜನೈರೊ, ಆ.11: ಈ ಸಲದ ಒಲಿಂಪಿಕ್‌ನಲ್ಲಿ ಪದಕ ಗೆಲ್ಲಲು ವಿಫಲವಾದ ನಿರಾಶೆಯಿದ್ದರೂ ಮುಖದಲ್ಲಿ ಪ್ರಕಟಿಸದೆ ಭಾರತದ ಶೂಟಿಂಗ್ ಪ್ರತಿಭೆ ಅಭಿನವ್ ಬಿಂದ್ರಾ ತನ್ನ ಇಪ್ಪತ್ತು ವರ್ಷದ ಕ್ರೀಡಾ ಜೀವನದ ಕುರಿತು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು" ಸೋಲು ಗೆಲುವು ಕ್ರೀಡೆಯ ಒಂದು ಭಾಗವಾಗಿದೆ. ನಾನು ನನ್ನ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದೇನೆ. ಐದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದೆ. ಒಂದು ಚಿನ್ನವನ್ನು ಗಳಿಸಿದೆ ಎಲ್ಲದ್ದಕ್ಕೂ ಸಂತೋಷವಿದೆ. ಎಲ್ಲರಿಗೂ ಕೃತಜ್ಞತೆ" ಎಂದು ಬಿಂದ್ರ ಹೇಳಿದ್ದಾರೆಂದು ವರದಿಯಾಗಿದೆ.
" ನಿವೃತ್ತಿಯ ನಿರ್ಧಾರ ಅಚಲವಾದುದು. ಇನ್ನೂ ಶೂಟಿಂಗ್‌ನತ್ತ ಇಲ್ಲ. ತರಬೇತಿದಾರನ ಪಾತ್ರಕ್ಕೂ ನಾನಿಲ್ಲ. ನಾನು ತರಬೇತಿದಾರನಾದರೆ ಎರಡು ಗಂಟೆಯಲ್ಲಿ ಮಕ್ಕಳು ಎದ್ದು ಓಡಿ ಬಿಡಬಹುದು" ಎಂದು ತಮಾಷೆಯಾಗಿ ಬಿಂದ್ರ ಹೇಳಿದ್ದಾರೆ. "ಮನೆಯ ಹಿತ್ತಿಲಿನಲ್ಲಿ ನಿರ್ಮಿಸಿರುವ ಶೂಟಿಂಗ್ ರೇಂಜ್‌ನ್ನು ಕೆಡವಿಹಾಕಿ ಅಲ್ಲಿ ತರಕಾರಿ ಬೆಳೆಯುತ್ತೇನೆ" ಎಂದು ಲಘು ಧಾಟಿಯಲ್ಲಿ ಹೇಳಿದ್ದಾರೆ.
ಪಂಜಾಬ್‌ನ ಶ್ರೀಮಂತ ಸಿಖ್ ಕುಟುಂಬದಲ್ಲಿ ಜನಿಸಿರುವ ಬಿಂದ್ರ, 13 ಎಕರೆ ಫಾರ್ಮ್ ಹೌಸ್‌ನಲ್ಲಿ ಹವಾನಿಯಂತ್ರಿತ ಶೂಟಿಂಗ್ ರೇಂಜೊಂದನ್ನು ಹೊಂದಿದ್ದಾರೆ. ಬಿಂದ್ರರ ಅಭ್ಯಾಸಕ್ಕಾಗಿ ಅವರ ತಂದೆ ಅದನ್ನು ನಿರ್ಮಿಸಿ ಕೊಟ್ಟಿದ್ದರು ಎಂದು ವರದಿ ತಿಳಿಸಿದೆ.







