ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸಿಲ್‌ಗೆ ಅಡ್ಡಿ: ಮೂವತ್ತು ಪ್ರತಿಭಟನಕಾರರ ಬಂಧನ, ಬಿಡುಗಡೆ
.gif)
ಮಂಗಳೂರು, ಆ.11: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕುರಿತ ಕೌನ್ಸಿಲಿಂಗ್ ಸಭೆಗೆ ಅಡ್ಡಿಪಡಿಸಿದ ಡಿವೈಎಫ್‌ಐ, ಎಸ್‌ಎಫ್‌ಐ ಹಾಗೂ ಶಿಕ್ಷಣಾಸಕ್ತರ ಒಕ್ಕೂಟದ 30ಕ್ಕೂ ಅಧಿಕ ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ಇಂದು ನಡೆದಿದೆ.
ನಗರದ ಬೋಳಾರದಲ್ಲಿರುವ ಬಿ.ಇ.ಒ. ಕಚೇರಿಯಲ್ಲಿ ನಡೆಯುತ್ತಿದ್ದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕುರಿತಂತೆ ಎರಡನೆ ಹಂತದ ಕೌನ್ಸಿಲಿಂಗ್ ಸಭೆಯನ್ನು ಇಂದು ಕರೆಯಲಾಗಿತ್ತು. ಈ ಕೌನ್ಸಿಲಿಂಗ್ ಸಭೆಯನ್ನು ನಡೆಸದಂತೆ ಡಿವೈಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಬುಧವಾರ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರಿಗೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೌನ್ಸಿಲಿಂಗ್ ನಡೆಸದಂತೆ ಜಿಪಂ ಅಧ್ಯಕ್ಷರು ಸೂಚಿಸಿದ್ದರು. ಆದರೂ ಕೌನ್ಸಿಲಿಂಗ್ ಸಭೆ ನಡೆಸಿರುವುದನ್ನು ವಿರೋಧಿಸಿ ಡಿವೈಎಫ್‌ಐ, ಎಸ್‌ಎಫ್‌ಐ ಹಾಗೂ ಶಿಕ್ಷಣಾಸಕ್ತರ ಒಕ್ಕೂಟದ ಸದಸ್ಯರು ಸಭೆಗೆ ಅಡ್ಡಿಪಡಿಸಿದರು. ಈ ವೇಳೆ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು.
ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ಬಿ.ಕೆ.ಇಮ್ತಿಯಾಝ್, ಎಸ್‌ಎಫ್‌ಐ ಮುಖಂಡರಾದ ನಿತಿನ್ ಕುತ್ತಾರ್, ಚರಣ್, ಶಾಲಾಭಿವೃದ್ಧಿ ಸಮಿತಿಯ ರಹ್ಮಾನ್, ಖೈರುನ್ನಿಸ ಮೊದಲಾದವರು ಬಂಧನಕ್ಕೊಳಗಾದರು.





