ಐಸಿಸ್‌ನ್ನು ಸ್ಥಾಪಿಸಿದ್ದೇ ಒಬಾಮ ! : ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್, ಆ.11: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಬ್ಬರ ನಡುವೆ ಆರೋಪ-ಪ್ರತ್ಯಾರೋಪದ ಸರಣಿ ಮುಂದುವರಿಯುತ್ತಿದೆ. ಅಧ್ಯಕ್ಷ ಸ್ಥಾನದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಚಿತ್ರವಿಚಿತ್ರ ಆರೋಪಗಳಿಂದ ಈಗಾಗಲೇ ಜಗತ್ತಿನ ಗಮನ ಸೆಳೆದಿದ್ದಾರೆ. ಬುಧವಾರ ಪ್ಲಾರಿಡಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಈಗಿನ ಅಧ್ಯಕ್ಷ ಬರಾಕ್ ಹುಸೈನ್ ಒಬಾಮರೇ ಭಯೋತ್ಪಾದಕ ಸಂಘಟನೆ ಐಸಿಸ್‌ನ್ನು ಸ್ಥಾಪಿಸಿದ್ದಾರೆ ಎಂದಿದ್ದಾರೆ. ಅವರ ಹೇಳಿಕೆ ಅಮೆರಿಕದ ರಾಜಕೀಯ ವಲಯದಲ್ಲಿ ಬಹುದೊಡ್ಡ ಸಂಚಲನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. " ಐಸಿಸ್ ಸ್ಥಾಪನೆಯಲ್ಲಿ ಒಬಾಮರ ಹಸ್ತವಿದೆ. ಮಧ್ಯಪ್ರಾಚ್ಯದಿಂದ ಹಿಡಿದು ಯುರೋಪಿನ ನಗರಗಳವರೆಗೆ ಐಸಿಸ್ ಬೆದರಿಕೆ ಒಬಾಮರಿಂದಾಗಿ ಹರಡುವಂತಾಗಿದೆ" ಎಂದು ಅವರು ಆರೋಪಿದ್ದಾರೆ. ಇದಕ್ಕಿಂತ ಮೊದಲು ತನ್ನ ಪ್ರತಿಸ್ಪರ್ಧಿ ಹಿಲೆರಿ ಕ್ಲಿಂಟನ್‌ರನ್ನು ಐಸಿಸ್ ಸಂಸ್ಥಾಪಕಿ ಎಂದು ಜರೆದಿದ್ದರು ಎಂದು ವರದಿ ತಿಳಿಸಿದೆ.





