ಹಾಸನ ಜಿಲ್ಲಾ ಉಸ್ತುವಾರಿ ಸಚಿವರಿಂದ ಸುಳ್ಳು ಹೇಳಿಕೆ: ಶಾಸಕ ಎಚ್.ಎಸ್. ಪ್ರಕಾಶ್ ಆರೋಪ

ಹಾಸನ, ಆ.11: ಎಸ್.ಎಂ. ಕೃಷ್ಣ ನಗರ ಬಡಾವಣೆಗೆ 70 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ ಎಂದು ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ಗಂಭಿರವಾಗಿ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಅನುದಾನದಿಂದಲೂ ಎಸ್.ಎಂ. ಕೃಷ್ಣ ನಗರ ಬಡಾವಣಿಗೆ ಹಣ ಬಿಡುಗಡೆಯಾಗಿಲ್ಲ. ಅದು ಸಾರ್ವಜನಿಕರ ಅರ್ಜಿ ಹಣದಿಂದ ಬಂದ 60 ಕೋಟಿ ರೂ.ಗಳ ಹಣವಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಬಡಾವಣೆಗೆ ನೀರಿಗಾಗಿ ಕೊಳವೆ ಬಾವಿ ಕೊರೆಸಿದರೂ ನೀರು ಬಂದಿಲ್ಲ. ಯಾವ ಮೂಲದಿಂದ ನೀರು ತರಲು ಸಾಧ್ಯವಿಲ್ಲ. ಅಮೃತ ಯೋಜನೆಯಿಂದ ನೀರು ಕೊಡಬಹುದು ಎಂದರು. ಶೇ.55 ಭಾಗ ಅಭಿವೃದ್ದಿಪಡಿಸಿದ ಭೂಮಿಯನ್ನು ರೈತರಿಗೆ ಕೊಡಲು 40:60 ಕೊಡಲು ಹೊಸ ಆಕ್ಟ್ ಪ್ರಕಾರ ತಿಳಿಸಿದೆ ಎಂದು ತಿಳಿಸಿದರು.
ಇತ್ತಿಚಿಗೆ ನಡೆಸಿದ ಜನಸಂಪರ್ಕ ಸಭೆಯಲ್ಲಿ ಆಯಾ ಕ್ಷೇತ್ರದ ಜನಪ್ರತಿನಿಧಿಗಳನ್ನು ಸೌಜನ್ಯಕ್ಕಾದರೂ ಕರೆದಿಲ್ಲ. ಹೊಸ ಬಸ್‌ನಿಲ್ದಾಣಕ್ಕೆ ಅವಶ್ಯಕವಾಗಿರುವ ಸಿಸಿ ಕ್ಯಾಮರ ಅಳವಡಿಸಲು ಕೆಎಸ್ಸಾರ್ಟಿಸಿಯಿಂದ ಹಣ ಕೊಡಿಸದೆ ನಗರಸಭೆಯ ಹೆಸರು ಹೇಳಿದ್ದಾರೆ. ಸರಕಾರಿ ಅಧಿಕಾರಿಗಳು ಯಾರಾದರೂ ಸಾರ್ವಜನಿಕರಿಂದ ಲಂಚ ಕೇಳಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸುವುದಾಗಿ ಜನಪ್ರತಿನಿಧಿ ಸಭೆಯಲ್ಲಿ ಹೇಳಿದ್ದಾರೆ. ಲಂಚದ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾಗಿದ್ದರೂ ಇದುವರೆಗೂ ಕ್ರಮ ಏತಕ್ಕಾಗಿ ಜರುಗಿಸಿಲ್ಲ ಎಂದು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ಬಸವರಾಜು ಇದ್ದರು.







