ಭೂ ಕಬಳಿಕೆ ವಿಚಾರದಲ್ಲಿ ಲಂಚ ನೀಡುವ ಪ್ರಸ್ತಾವನೆ: ಸಿಬಿಐ ತನಿಖೆಗೆ ಆದೇಶಿಸಲು ಎ.ಟಿ. ರಾಮಸ್ವಾಮಿ ಒತ್ತಾಯ

ಹಾಸನ, ಆ.11: ಭೂ ಕಬಳಿಕೆಯ ವಿಷಯದಲ್ಲಿ ನ್ಯಾಯಮೂರ್ತಿ ಮುಖರ್ಜಿ ಅವರು ಮುಕ್ತ ನ್ಯಾಯಾಲಯದಲ್ಲಿ ಬಹಿರಂಗಪಡಿಸಿ ಕ್ರಮಕೈಗೊಳ್ಳದೆ ವೌನವಹಿಸಿರುವುದರಿಂದ ಕೂಡಲೇ ಸಿಬಿಐ ತನಿಖೆಗೆ ಆದೇಶಿಸಲು ಮುಂದಾಗುವಂತೆ ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ ಎ.ಟಿ. ರಾಮಸ್ವಾಮಿ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಕೆ. ಮುಖರ್ಜಿ ಅವರು ಪೀಠದ ಮುಂದಿರುವ ಒಂದು ಪ್ರಕರಣದಲ್ಲಿ ತಮಗೆ ಲಂಚ ನೀಡಲು ಪ್ರಸ್ತಾವನೆ ಮಾಡಿದ ವಿಷಯವನ್ನು ಮುಕ್ತ ನ್ಯಾಯಾಲಯದಲ್ಲಿ ಬಹಿರಂಗಗೊಳಿಸಿದ ನಂತರ ಯಾವುದೇ ಕ್ರಮ ಕೈಗೊಂಡಿರುವುದಿಲ್ಲವಾದ್ದರಿಂದ ಕೂಡಲೇ ಸಿಬಿಐ ತನಿಖೆಗೆ ಆದೇಶ ಮಾಡಬೇಕೆಂದು ಜುಲೈ 26 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್‌ರಿಗೆ ಮನವಿ ಮಾಡಿ ಪತ್ರ ಬರೆದಿರುವುದಾಗಿ ಹೇಳಿದರು.
ದೇಶದಲ್ಲಿ ಅನೇಕ ಪ್ರಾಮಾಣಿಕ ನ್ಯಾಯಾಧೀಶರು ನಾಗರೀಕರು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದರೆ, ಕೆಲವು ನ್ಯಾಯಾಧೀಶರ ನಡವಳಿಕೆಗಳು ಈ ನಂಬಿಕೆಯನ್ನೇ ಬುಡಮೇಲು ಮಾಡುವ ರೀತಿಯಲ್ಲಿವೆ ಎಂದು ಕಳವಳ ವ್ಯಕ್ತಪಡಿಸಿದರು. ನ್ಯಾಯಾಧಿಕರಣದ ಮೇಲೆ ನಂಬಿಕೆ ಇಟ್ಟು ನಾಗರೀಕರು ನ್ಯಾಯಂಗ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ಮೊರೆ ಹೋಗುತ್ತಾರೆ. ಆದರೆ ನ್ಯಾಯ ನೀಡುವ ನ್ಯಾಯಧೀಶರೇ ಹೀಗೆ ಮಾಡಿದರೆ ನಾಗರೀಕರಿಗೆ ಯಾವ ನಂಬಿಕೆ ಇರುತ್ತದೆ ಎಂದು ಆತಂಕವ್ಯಕ್ತಪಡಿಸಿದರು.
ಕೆಪಿಎಸ್ಸಿಗೆ ನೇಮಕವಾಗಿರುವ ಶ್ಯಾಂಭಟ್ ಅವರ ಮೇಲೆ ಯಾರಿಗೂ ಸಹ ನಂಬಿಕೆ ಇಲ್ಲ. ಅವರ ಇತಿಹಾಸ ತಿಳಿದಾಗ ಈ ಹಿಂದೆ ಇಲಾಖೆಗಳಲ್ಲೂ ಒಳ್ಳೆಯ ಹೆಸರು ಸಂಪಾದನೆ ಮಾಡಿಲ್ಲ. ಈಗಾಗಲೇ ಆಯೋಗದಲ್ಲಿ ಕೆಟ್ಟ ಅಭಿಪ್ರಾಯ ಕೇಳಿ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ಇತರರು ಇದ್ದರು.







