' ಗೊಬೆಲ್ಸ್' ಸ್ವಾಮಿಗೆ ತಿರುಗೇಟು ನೀಡಿದ ಎನ್ ಡಿ ಟಿ ವಿ

ಹೊಸದಿಲ್ಲಿ, ಆ.11: ಕಪ್ಪುಹಣ ಬಿಳುಪುಗೊಳಿಸುವ (ಹಣಚೆಲುವೆ) ಅವ್ಯವಹಾರಗಳಲ್ಲಿ ತಾನು ಶಾಮೀಲಾಗಿದ್ದೇನೆಂಬ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅವರ ಆರೋಪಗಳು ಸುಳ್ಳೆಂದು ರಾಷ್ಟ್ರೀಯ ಸುದ್ದಿವಾಹಿನಿ ಎನ್‌ಡಿಟಿವಿ ಗುರುವಾರ ಕಟುವಾಗಿ ಪ್ರತಿಕ್ರಿಯಿಸಿದೆ.
ಹಣ ಚೆಲುವೆ ಪ್ರಕರಣಕ್ಕೆ ಎನ್‌ಡಿಟಿವಿ ಹಾಗೂ ಅದರ ಜೊತೆ ಸಂಬಂಧ ಹೊಂದಿರುವ ಗಣ್ಯ ವ್ಯಕ್ತಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ ( ಸಿಬಿಐ) ಸುಬ್ರಹ್ಮಣ್ಯಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಜಾರಿ ನಿರ್ದೇಶನಾಲಯ (ಇಡಿ) ಕೂಡಾ ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸಬೇಕೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದರು.
ಸುಬ್ರಹ್ಮಣ್ಯನ್ ಸ್ವಾಮಿ ಅವರು ತನ್ನ ವಿರುದ್ಧ ಮಾಡಿರುವ ಹಣ ಚೆಲುವೆ ಮತ್ತಿತರ ಆರೋಪಗಳ ಬಗ್ಗೆ ಸುದ್ದಿವಾಹಿನಿಯು ಐದು ಅಂಶಗಳ ಪ್ರತ್ಯುತ್ತರವನ್ನು ಇಂದು ಪತ್ರಿಕಾ ಹೇಳಿಕೆಯೊಂದರಲ್ಲಿ ಬಿಡುಗಡೆಗೊಳಿಸಿದೆ.
ರಘುರಾಮ್ ರಾಜನ್ ಅವರು ಆರ್‌ಬಿಐ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ. ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಹದ್ದುಮೀರಿ ವರ್ತಿಸಿದ್ದಾರೆಂದು ಆಪಾದಿಸಿದ ಬಳಿಕ ಪ್ರಧಾನಿಯಿಂದ ತರಾಟೆಗೊಳಗಾದ ಸುಬ್ರಹ್ಮಣ್ಯನ್ ಸ್ವಾಮಿ ಪ್ರಚಾರದ ‘ಆಮ್ಲಜನಕ’ದಿಂದ ವಂಚಿತರಾಗಿದ್ದಾರೆ.ಹೀಗಾಗಿ, ಅವರು ಹೊಸ ಸುಳ್ಳುಗಳ ಕಂತೆಯೊಂದಿಗೆ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ಎನ್‌ಡಿಟಿವಿ ಬಗ್ಗೆ ಸುಳ್ಳು ಹೇಳತೊಡಗಿದ್ದಾರೆಂದು ಪತ್ರಿಕಾ ಹೇಳಿಕೆ ಆಪಾದಿಸಿದೆ. ಗೊಬೆಲ್ಸ್‌ನಂತೆ ಸುಬ್ರಹ್ಮಣ್ಯ ಸ್ವಾಮಿ ಕೂಡಾ ಒಂದು ಸುಳ್ಳನ್ನು ಪುನಾರವರ್ತಿಸುವ ಮೂಲಕ ಅದನ್ನು ನಿಜವೆಂದು ನಂಬುವ ಹಾಗೆ ಮಾಡಬಹುದೆಂದು ಭಾವಿಸಿದ್ದಾರೆ ಎಂದು ಅದು ಹೇಳಿದೆ. ರಾಜ್ಯಸಭೆಗೆ ನಾಮಕರಣಗೊಂಡ ವ್ಯಕ್ತಿಯೊಬ್ಬರು ಸತ್ಯದ ಬಗ್ಗೆ ಇಷ್ಟೊಂದು ಅಗೌರವವನ್ನು ಹೊಂದಿರುವುದು ನಾಚಿಕೆಗೇಡೆಂದು ಅದು ಹೇಳಿದೆ.
ಎನ್‌ಡಿಟಿವಿ ಹಣ ಚೆಲುವೆ ಅವ್ಯವಹಾರದಲ್ಲಿ ತೊಡಗಿದೆಯೆಂಬುದು ಶುದ್ಧ ಸುಳ್ಳು. 2010ರಲ್ಲಿ ಎನ್‌ಡಿಟಿವಿಯ ಲೈಫ್‌ಸ್ಟೈಲ್ ಉದ್ಯಮಕ್ಕೆ ಆಸ್ಟ್ರೋ ಸಂಸ್ಥೆಯು 40 ದಶಲಕ್ಷ ಡಾಲರ್ ಹೂಡಿಕೆ ಮಾಡಿತ್ತು. ಇದಕ್ಕೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ ಹಾಗೂ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಅನುಮೋದನೆ ಪಡೆಯಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಹಾಗೂ ಶೇರುವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಸ್ವಾಮಿಯವರು ಆಪಾದಿಸಿರುವ ಹಾಗೆ ಎನ್‌ಡಿಟಿವಿ ವಿರುದ್ಧ ಮೇಲೆ ಜಾರಿ ನಿರ್ದೇಶನಾಲಯವು 2030 ಕೋಟಿ ರೂ.ಗಳ ಯಾವುದೇ ದಂಡವನ್ನು ವಿಧಿಸಿಲ್ಲ. ಎನ್‌ಡಿಟಿವಿ ನೆಟ್‌ವರ್ಕ್ ಸಂಸ್ಥೆಯಲ್ಲಿ ನಿರ್ದೇಶಕರೆಂದು ಹೆಸರಿಸಲ್ಪಟ್ಟವರು ವಾಸ್ತವಿಕವಾಗಿ ನಿರ್ದೇಶಕರಲ್ಲವೆಂಬ ಅವರ ಆರೋಪದಲ್ಲಿಯೂ ಯಾವುದೇ ಹುರುಳಿಲ್ಲ. ಫ್ಯೂಸ್ ಮೆಡಿಯಾ, ಎನ್‌ಡಿಟಿವಿಗೆ ಸೇರಿದ ಕಂಪೆನಿಯಲ್ಲವೆಂಬ ಸುಬ್ರಹ್ಮಣ್ಯನ್ ಅವರ ಆರೋಪ ಕೂಡ ಇನ್ನೊಂದು ಹಸಿ ಸುಳ್ಳಾಗಿದೆ. ಈ ಕಂಪೆನಿಯು ಅತ್ಯಂತ ಗೌರವಾನ್ವಿತ ಖಾಸಗಿ ಇಕ್ವಿಟಿ ಹೂಡಿಕೆದಾರನಾಗಿದ್ದು, ಅದು ಈಗಲೂ ಎನ್‌ಡಿಟಿವಿ ನೆಟ್‌ವರ್ಕ್‌ನ ಹೂಡಿಕೆದಾರನಾಗಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.ಎನ್‌ಡಿಟಿವಿ ಲೈಫ್‌ಸ್ಟೈಲ್ ಉದ್ಯಮದಲ್ಲಿ ಆಸ್ಟ್ರೋ ಸಂಸ್ಥೆಯ ಹೂಡಿಕೆಯನ್ನು ತೆರಿಗೆ ಇಲಾಖೆಯು ಪರಿಶೀಲಿಸಿದ್ದು, ಅದು ಕ್ರಮಬದ್ಧವಾದುದೆಂದು ಘೋಷಿಸಿದೆ.
ಎನ್‌ಡಿಟಿವಿ ನೆಟ್‌ವರ್ಕ್ಸ್ ಒಂದು ಪರಿಶುದ್ಧ ಕಂಪೆನಿಯಾಗಿದ್ದು, ಅದರ ಎಲ್ಲಾ ಹೂಡಿಕೆಗಳು ವಿದೇಶಿ ಹೂಡಿಕೆ ಮಂಡಳಿಯ ಅನುಮೋದನೆಯನ್ನು ಪಡೆದಿವೆಯೆಂದು ಪತ್ರಿಕಾ ಹೇಳಿಕೆ ತಿಳಿಸಿದೆ. 2ಜಿ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಲಯವು ಎನ್‌ಡಿಟಿವಿ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಎನ್‌ಡಿಟಿವಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಅರ್ಜಿದಾರನ ವಿರುದ್ಧ ದಂಡ ವಿಧಿಸಿತ್ತು ಎಂದು ಎನ್‌ಡಿಟಿವಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.





