ಪುತ್ತೂರು: ದಿ.ಮುಹಮ್ಮದ್ ಹಟ್ಟಾ ನೆನಪಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ

ಪುತ್ತೂರು, ಆ.11: ಸೇವಾ ಚಿಂತನೆಯೊಂದಿಗೆ ಯುವ ಸಮುದಾಯದಲ್ಲಿ ಮಾನವೀಯ ಮನೋಭಾವ ಬೆಳೆಯಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ.
ಅವರು ಯುವ ಕಾಂಗ್ರೆಸ್ ವತಿಯಿಂದ ಪುತ್ತೂರಿನ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಮುಖಂಡ ದಿ.ಮುಹಮ್ಮದ್ ಹಟ್ಟಾ ಅವರ ಸ್ಮರಣಾರ್ಥ ನಡೆದ 4ನೆ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನ ಮಹಾದಾನವಾಗಿದ್ದು, ಇನ್ನೊಬ್ಬರ ಪ್ರಾಣವನ್ನು ರಕ್ಷಿಸಲು ನಮ್ಮ ರಕ್ತವನ್ನು ನೀಡುವುದು ಪುಣ್ಯದ ಕೆಲಸವಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಇಂತಹ ಕೆಲಸಗಳನ್ನು ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ ರಕ್ತದಾನದ ಮೂಲಕ ನಮ್ಮನ್ನು ಅಗಲಿರುವ ನಾಯಕರನ್ನು ನೆನಪಿಸಿಕೊಳ್ಳುವುದು ನೈಜ ಧರ್ಮವಾಗಿದೆ. ಯುವ ಕಾಂಗ್ರೆಸ್ ವತಿಯಿಂದ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯ ಡಾ. ರಾಮಚಂದ್ರ ಭಟ್, ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಶ್ರೀರಾಂ ಪಕ್ಕಳ, ಬ್ಲಾಕ್ ಉಪಾಧ್ಯಕ್ಷ ಮುರಳೀಧರ ರೈ, ಹಟ್ಟಾ ಅವರ ಸಹೋದರ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜೊತೆ ಕಾರ್ಯದರ್ಶಿ ಯಾಕೂಬ್ ದರ್ಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದೀನ್ ಅರ್ಷದ್ ದರ್ಬೆ ಸ್ವಾಗತಿಸಿದರು. ಕೃಷ್ಣಪ್ರಸಾದ್ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿದರು.







