ಪಟ್ಟಣದ ಸ್ವಚ್ಛತೆಗೆ ಜನ ಜಾಗೃತಿ, ಜನತೆಯ ಸಹಕಾರ ಅಗತ್ಯ
ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆ

ವೀರಾಜಪೇಟೆ, ಆ.11: ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಜನರ ಸಹಕಾರ ಮತ್ತು ಜಾಗೃತಿ ಮೂಡಿಸದಿದ್ದರೆ ಸ್ವಚ್ಛತೆ ಅಭಿಯಾನಕ್ಕೆ ಎಷ್ಟು ಹಣ ವೆಚ್ಚ ಮಾಡಿದರೂ ಪ್ರಯೋಜನವಿಲ್ಲ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ.
ಪಟ್ಟಣ ಪಂಚಾಯತ್ ಪುರಭವನದಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಲು ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬೋಪಯ್ಯ, ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಗಮನ ಹರಿಸಿ ಇಡೀ ಭಾರತ ಸ್ವಚ್ಛ ಭಾರತವಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆಗಾಗಿ ಕೇವಲ ಸಭೆ ಸಮಾರಂಭಗಳನ್ನು ನಡೆಸಿದರೆ ಸಾಲದು ನಮ್ಮನ್ನು ನಾವು ಆತ್ಮ ಪೂರ್ವಕವಾಗಿ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳಬೇಕು. ಇತರರಲ್ಲಿಯೂ ಜಾಗೃತಿ ಮೂಡಿಸಬೇಕು. ಇಂದಿನ ಸ್ಪರ್ಧಾತ್ಪಕ ಯುಗದಲ್ಲಿ ಸಮಾಜದಲ್ಲಿ ಎಲ್ಲ ರೀತಿಯ ಸವಾಲುಗಳು ಇರುವಾಗ ಇಂತಹ ಕಾರ್ಯಕ್ರಮಗಳು ಪೂರಕ ಕಾರ್ಯಕ್ರಮಗಳಾಗಬೇಕು ಎಂದು ಹೇಳಿದರು.
ಪಟ್ಟಣಪಂಚಾಯತ್ ಅಧ್ಯಕ್ಷ ಸಚಿನ್ ಕುಟ್ಟಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸುವ ಕುರಿತು ಇಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಪಟ್ಟಣ ನಗರಗಳಲ್ಲಿ ಪರಿಸರ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ತಸ್ಲೀಂ ಅಕ್ತರ್, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ ಸುನಿತಾ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಇ.ಸಿ ಜೀವನ್, ಉಪಸ್ಥಿತರಿದ್ದರು.







